ಮಡಿಕೇರಿ,ಆ.18: ವಿಶ್ವ ಛಾಯಾಗ್ರಹಣ ದಿನಾಚರಣೆಗೆ ಸಂಬಂಧಿಸಿದಂತೆ ಕೊಡಗು ಪತ್ರಕರ್ತ ಸಂಘದ ಸದಸ್ಯರಿಗಾಗಿ ಆಯೋಜಿತ ಫೋಟೋಗ್ರಫಿ ಮತ್ತು ವಿಡಿಯೋ ಗ್ರಫಿ ಸ್ಪರ್ಧೆಯಲ್ಲಿ ಜಿಲ್ಲೆಯ 4 ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಘದಿಂದ ಕೊಡಮಾಡುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುತ್ತಮ ಫೋಟೋಗ್ರಫಿ ಸ್ಪರ್ಧೆಯಲ್ಲಿ ಸಂಯುಕ್ತ ಕರ್ನಾಟಕದ ಮೂರ್ನಾಡು ವರದಿಗಾರ ಟಿ.ಸಿ.ನಾಗರಾಜ್ ಅವರ ‘ಪೈರು ಹೊತ್ತ ರೈತ’ ಪ್ರಥಮ ಸ್ಥಾನ, ವಿಶ್ವವಾಣಿ ಜಿಲ್ಲಾ ವರದಿಗಾರ ಅನಿಲ್ ಎಚ್.ಟಿ. ಅವರ ‘ಪೈರು ಬೆಳೆಯಲು ಒಂದಾಗಿ ಬಂದೆವು’ ಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಜಲಪಾತ ವೈಭವ ಸಂಬಂಧಿಸಿದ ಅತ್ಯುತ್ತಮ ವಿಡಿಯೋ ಗ್ರಾಫಿ ಪ್ರಶಸ್ತಿಯಲ್ಲಿ ‘ಮೇದುರ ಅಬ್ಬಿ ಸೌಂದರ್ಯ’ಕ್ಕಾಗಿ ಪ್ರಜಾ ಟಿವಿ ಕ್ಯಾಮರಾಮೆನ್ ವಿಜಯ್ ಕಾಟಕೇರಿ ಪ್ರಥಮ ಸ್ಥಾನ, ಮೈಸೂರು ಮಿತ್ರ ಜಿಲ್ಲಾ ವರದಿಗಾರ ಪ್ರಸಾದ್ ಸಂಪಿಗೆಕಟ್ಟೆ ‘ಅವರ ಕೋಟೆ ಅಬ್ಬಿ ವೈಭವ’ ದ್ವಿತೀಯ ಸ್ಥಾನ ಪಡೆದಿದೆ.
ದತ್ತಿ ನಿಧಿ ಪ್ರಶಸ್ತಿ:
ಅತ್ಯುತ್ತಮ ಮಾನವೀಯ ಮೌಲ್ಯಗಳು:
ಸಂಘದ ಹಿರಿಯ ಸಲಹೆಗಾರರು, ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ತಮ್ಮ ಪುತ್ರಿ ಡಾ.ಅನುಶ್ರೀ ಅವರ ‘ಹ್ಯಾಪಿ ಟೀತ್’ ಡೆಂಟಲ್ ಕ್ಲಿನಿಕ್ ಹೆಸರಿನಲ್ಲಿ ಸ್ಥಾಪಿಸಿರುವ ‘ಮಾನವೀಯ ಮೌಲ್ಯ’ಗಳನ್ನು ಒಳಗೊಂಡ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ವಿಶ್ವವಾಣಿ ಜಿಲ್ಲಾ ವರಿದಗಾರ ಅನಿಲ್ ಎಚ್.ಟಿ. ಅವರ ‘ಬದುಕಲಿ ಬೇಕು ಭರವಸೆಯ ರಂಗೋಲಿ’ ಚಿತ್ರ ಮೊದಲ ಸ್ಥಾನ ಪಡೆದಿದೆ. ಫೋಟೋಗ್ರಫಿ ಮತ್ತು ವಿಡಿಯೋ ಗ್ರಫಿಯ ತೀರ್ಪುಗಾರರಾಗಿ ಹಿರಿಯ ಛಾಯಾಚಿತ್ರಗಾರ ಎನ್.ಎಂ.ಕುಮಾರ್ ಅವರು ಕಾರ್ಯ ನಿರ್ವಹಿಸಿದ್ದಾರೆ ಎಂದು ಕೊಡಗು ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ ತಿಳಿಸಿದ್ದಾರೆ.