ಮಡಿಕೇರಿ ಆ.19 : ಬದಲಾಗುತ್ತಿರುವ ಕಾಲಘಟ್ಟದಲ್ಲಿ ಛಾಯಾಗ್ರಾಹಕರು ಆಧುನಿಕ ತಾಂತ್ರಿಕತೆಗಳಿಗೆ ಹೊಂದಿಕೊಂಡು ಉನ್ನತೀಕರಣ ಸಾಧಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ.
ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಂಜಿನನಗರಿ ಛಾಯಾಗ್ರಾಹಕರ ಸಂಘದ ಆಶ್ರಯದಲ್ಲಿ ನಗರದ ಲಯನ್ಸ್ ಸಭಾಂಗಣದಲ್ಲಿ ಆಯೋಜಿತ 184ನೇ ‘ವಿಶ್ವ ಛಾಯಾಗ್ರಹಣ ದಿನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಕೈಯಲ್ಲಿ ಇಂದು ಮೊಬೈಲ್‍ಗಳು ಬಂದಿರುವುದರಿಂದ ಎಲ್ಲರೂ ಛಾಯಾಗ್ರಾಹಕರಾಗುತ್ತಿರುವುದಲ್ಲದೆ, ಸಾಮಾಜಿಕ ಜಾಲತಾಣಗಳ ಬರವಣಿಗೆಗಳ ಮೂಲಕ ವರದಿಗಾರರು ಆಗುತ್ತಿದ್ದಾರೆ. ಈ ಹಿನ್ನೆಲೆ ಛಾಯಾಗ್ರಾಹಕರು ಬದಲಾಗುತ್ತಿರುವ ಸಂದರ್ಭಕ್ಕೆ ತಕ್ಕಂತೆ ತಾಂತ್ರಿಕತೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ಕರೆ ನೀಡಿದರು.
::: ದತ್ತಿ ಪ್ರಶಸ್ತಿಯ ಘೋಷಣೆ :::
ಛಾಯಾ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಆರ್. ವಸಂತ್ ಅವರ ಮನವಿಯ ಮೇರೆ ಇದೇ ಸಂದರ್ಭ ಶಾಸಕ ಡಾ. ಮಂತರ್ ಗೌಡ ಅವರು, ತಮ್ಮ ಅಜ್ಜಿ ಸಾಕಮ್ಮ ಅವರ ಸ್ಮರಣಾರ್ಥ ಛಾಯಾಗ್ರಾಹಕರ ಸಂಘ ಮತ್ತು ಕೊಡಗು ಪತ್ರಕರ್ತರ ಸಮಘಕ್ಕೆ ದತ್ತಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.
ಜಿಲ್ಲ ಕೇಂದ್ರದಲ್ಲಿ ‘ಛಾಯಾ ಭವನ’ದ ಬೇಡಿಕೆ ಇರುವುದನ್ನು ಪ್ರಸ್ತಾಪಿಸಿದ ಅವರು, ಅಗತ್ಯ ಜಾಗವನ್ನು ತಾವು ತೋರಿಸಿದಲ್ಲಿ ಆ ನಿಟ್ಟಿನಲ್ಲಿ ಅದನ್ನು ಒದಗಿಸಲು ಪ್ರಯತ್ನಿಸುವುದಲ್ಲದೆ, ಛಾಯಾಗ್ರಾಹಕರ ಸಂಕಷ್ಟಗಳ ಕುರಿತ ವಿವರವಾದ ಮಾಹಿತಿಯನ್ನು ಒದಗಿಸಿದಲ್ಲಿ ಅಧಿವೇಶನದಲ್ಲೂ ಅದನ್ನು ಪ್ರಸ್ತಾಪಿಸುತ್ತೇನೆ. ಗ್ರಾಮೀಣ ಭಾಗಗಳ ಯಾವೆಲ್ಲ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅಗತ್ಯವಿದೆಯೋ ಅದರ ಪಟ್ಟಿಯನ್ನು ಒದಗಿಸಿದಲ್ಲಿ, ಅಂತಹವರಿಗೆ ಸೌಲಭ್ಯ ಒದಗಿಸಲು ಶ್ರಮಿಸುವುದಾಗಿ ಸ್ಪಷ್ಟಪಡಿಸಿದರು.
ಛಾಯಾಚಿತ್ರ ಚರಿತ್ರೆಯನ್ನು ಉಳಿಸಿ ಬೆಳೆಸುತ್ತದೆ : ಕೊಡಗು ಪತ್ರಕರ್ತರ ಸಂಘದ ಸಲಹೆಗಾರರು ಹಾಗೂ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತ ಶಯನ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ, ಉತ್ತಮ ಛಾಯಾಚಿತ್ರಗಳು ಚರಿತ್ರೆಯನ್ನು ಉಳಿಸಿ ಬೆಳೆಸಬಲ್ಲುದೆಂದು ಅಭಿಪ್ರಾಯಿಸಿದರು.
ಮನುಷ್ಯ ವಿಕಾಸದ ಹಾದಿಯಲ್ಲಿ ಸಾಗುವ ಹಂತದಲ್ಲಿ ಚಿತ್ರಗಳ ರಚನೆ ಆರಂಭಗೊಂಡಿತು. ಆತನ, ಉತ್ಸಾಹ, ಕುತೂಹಲ, ಕ್ರಿಯಾ ಶೀಲತೆಗಳಿಂದಾಗಿ ಇಂದು ಅತ್ಯಾಧುನಿಕ ಡಿಜಿಟಲೀಕೃತ ಫೋಟೋಗ್ರಾಫಿಯವರೆಗೆ ನಾವು ಬಂದಿದ್ದೇವೆ. ಛಾಯಾಚಿತ್ರಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ. ಅತ್ಯಂತ ಪರಿಣಾಮಕಾರಿ ಛಾಯಾಚಿತ್ರಗಳಿಂದ ಕಾನೂನು ಕಾಯ್ದೆಗಳು ರೂಪುಗೊಂಡಿರುವ ಉದಾಹರಣೆಗಳಿವೆಯಲ್ಲದೆ, ಸಮಾಜದಲ್ಲಿಯೂ ಸಾಕಷ್ಟು ಪರಿವರ್ತನೆಯನ್ನು ಕಾಣಲು ಸಾಧ್ಯವಾಗಿದೆಯೆಂದು ತಿಳಿಸಿದರು.
ಛಾಯಾಗ್ರಹಣವೆನ್ನುವುದು ಅತ್ಯಂತ ಖುಷಿ ನೀಡುವ ಹವ್ಯಾಸವಾಗಿದೆಯೆಂದು ಹೇಳಿ, ತಾವು ಫೋಟೋ ಸ್ಟುಡಿಯೋ ಒಂದನ್ನು ನಡೆಸಿ ಅದರಲ್ಲಿ ಆದ ಅನುಭವಗಳನ್ನು ಹಂಚಿಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾತನಾಡಿ, ಛಾಯಾಗ್ರಾಹಕ ಓರ್ವ ಕಲಾವಿದನೆ ಆಗಿದ್ದಾನೆ. ತಾಂತ್ರಿಕತೆ ಎಷ್ಟೇ ಬೆಳೆದಿರಲಿ, ವಸ್ತು ವಿಷಯವನ್ನು ಗ್ರಹಿಸುವ ಶಕ್ತಿ, ಕಲಾವಿದನ ಪ್ರತಿಭೆ ಇಲ್ಲದಿದ್ದಲ್ಲಿ ಉತ್ತಮ ಛಾಯಾಚಿತ್ರ ರೂಪುಗೊಳ್ಳಲಾರದು. ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಮಾಡಲಾಗದ ಕೆಲಸವನ್ನು ಒಂದು ಛಾಯಾಚಿತ್ರ ಪರಿಣಾಮಕಾರಿಯಾಗಿ ಮಾಡಬಲ್ಲುದು. ಸಮಾಜದ ಪರಿವರ್ತನೆಯೂ ಇದರಿಂದ ಸಾಧ್ಯವೆಂದು ದೃಢವಾಗಿ ನುಡಿದರು.
ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ ಮಾತನಾಡಿ, ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಛಾಯಾಗ್ರಹಣದ ಕೊಡುಗೆ ದೊಡ್ಡದೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಸ್.ಆರ್. ವಸಂತ್, ಛಾಯಾಗ್ರಾಹಕರು ಹಿಂದೆ ಎದುರಿಸುತ್ತಿದ್ದ ಸವಾಲುಗಳು ಬೇರೆ, ಇಂದು ಬದಲಾದ ವ್ಯವಸ್ಥೆಗಳಲ್ಲಿ ಎದುರಿಸುತ್ತಿರುವ ಸಂಕಷ್ಟಗಳು ಬೇರೆಯೇ ಆಗಿದೆ. ಛಾಯಾಗ್ರಾಹಕರ ಕ್ಷೇಮಕ್ಕಾಗಿ ‘ಛಾಯಾಚಿತ್ರ ಅಕಾಡೆಮಿ’ಯನ್ನು ಸ್ಥಾಪಿಸಿ ಅಗತ್ಯ ನೆರವು ಒದಗಿಸಬೇಕೆಂದು ಮನವಿ ಮಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಛಾಯಾಗ್ರಾಹಕರು ಮತ್ತು ಪತ್ರಕರ್ತರ ಬದುಕು ಹೊರ ಜಗತ್ತು ಕಂಡಷ್ಟು ಉತ್ತಮವಾಗಿಲ್ಲ. ಅವರ ಜೀವನ ಉತ್ತಮವಾಗಿ ರೂಪುಗೊಳ್ಳಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿ, ಛಾಯಾಗ್ರಾಹಕ ವಿಶ್ವ ಕುಮಾರ್ ಅವರು ತೆಗೆದ ಒಂದು ಪರಿಣಾಮಕಾರಿ ಛಾಯಾಚಿತ್ರದಿಂದ ತೆಪ್ಪದ ಕಂಡಿ ಸೇತುವೆ ನಿರ್ಮಾಣ ಸಾಧ್ಯವಾಯಿತೆಂದು ತಿಳಿಸಿದರು.
ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಸದಸ್ಯ ದೀಪಕ್, ಮಂಜಿನ ನಗರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪ್ರದೀಪ್ ಮರಗೋಡು ಉಪಸ್ಥಿತರಿದ್ದರು.
ಛಾಯಾಗ್ರಾಹಕರ ಸಂಘದ ಸುರೇಶ್ ಪ್ರಾರ್ಥಿಸಿ, ಸೋಲೋಮನ್ ಡೇವಿಡ್ ಸ್ವಾಗತಿಸಿದರು. ಕೊಡಗು ಪತ್ರಕರ್ತರ ಸಂಘದ ರಂಜಿತ್ ಕವಲಪಾರ ಮತ್ತು ಕೌಸರ್ ಕಾರ್ಯಕ್ರಮ ನಿರೂಪಿಸಿದರು.ಕೊಡಗು ಪತ್ರಕರ್ತರ ಸಂಘದ ಸಲಹೆಗಾರರಾದ ಅನಿಲ್ ಹೆಚ್.ಟಿ. ವಂದಿಸಿದರು.
::: ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ :::
ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ವಿಶ್ವ ಕುಮಾರ್ ಗುಡ್ಡೆಮನೆ ಅವರ ಛಾಯಾಚಿತ್ರ ಪ್ರದರ್ಶನ ನೊಡುಗರ ಗಮನ ಸೆಳೆಯಿತು.