ಮಡಿಕೇರಿ ಆ.19 : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾ.ಪಂ ಸಹಕಾರದೊಂದಿಗೆ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಗ್ರಾಮದ ದೇವಾಲಯ ಸಮಿತಿಯ ಆಶ್ರಯದಲ್ಲಿ ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಗದ್ದೆಯಲ್ಲಿ ಏರ್ಪಡಿಸಿದ್ದ ಎರಡನೇ ವರ್ಷದ ಜನಪದಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮ, ಸಡಗರದಿಂದ ಜರುಗಿತು.
ಶಾಲೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ (ಎನ್.ಎಸ್.ಎಸ್.) ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಶಾಲಾ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ.ಸಿ. ಹಾಗೂ ಗ್ರಾಮದ ಬಸವೇಶ್ವರ ಹಾಗೂ ದೊಡ್ಡಮ್ಮ ದೇವಾಲಯ ಸಮಿತಿ, ಸುಂಟಿಕೊಪ್ಪ ಜೆ.ಸಿ.ಐ.ಸಂಸ್ಥೆ ಹಾಗೂ ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ 77ನೇ ಸ್ವಾತಂತ್ರ್ಯೋತ್ಸವ-2023 ಗೋ ಗ್ರೀನ್ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ಜನರ ಗಮನ ಸೆಳೆಯಿತು.
ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಮಿಂದೆದ್ದು, ಆಟವಾಡುತ್ತಾ ಕುಣಿದು ಕುಪ್ಪಳಿಸಿದರು.
ಕೆಸರು ಗದ್ದೆಯಲ್ಲಿ ಮಕ್ಕಳ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ಬಾಯಲ್ಲಿ ಚಮಚದ ಮೇಲೆ ನಿಂಬೆ ಹಣ್ಣು ಇಟ್ಟು ಓಡುವುದು ಹಾಗೂ ತಲೆಯ ಮೇಲೆ ನೀರಿನ ಬಾಟಲ್ ಅನ್ನು ಇಟ್ಟುಕೊಂಡು ಓಡುವ ಸ್ಪರ್ಧೆ ಸೇರಿದಂತೆ ಇನ್ನಿತರ ಕ್ರೀಡಾ ಸ್ಪರ್ಧೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಗಮನ ಸೆಳೆಯಿತು.
ಗದ್ದೆಯಲ್ಲಿ ಕೆಸರು ಮೆದ್ದಿಕೊಂಡು ಹಗ್ಗ ಜಗ್ಗಾಟದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ತಮ್ಮ ತಂಡವು ಗೆಲ್ಲಬೇಕೆಂಬ ಹರಸಾಹಸದಿಂದ ತಮ್ಮ ಬಲವನ್ನು ಪ್ರದರ್ಶಿಸುತ್ತಿದ್ದುದು ಕಂಡುಬಂತು.
ಕೆಸರು ಗದ್ದೆ ಕ್ರೀಡಾಕೂಟದ ಮಹತ್ವದ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯೋಪಾಧ್ಯಾಯರೂ ಆದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ವಿದ್ಯಾರ್ಥಿಗಳಲ್ಲಿ ರೈತರ ಕೃಷಿ ಬದುಕಿನೊಂದಿಗೆ ರೈತರ ಜೀವನದ ಕಷ್ಟಸುಖಗಳನ್ನು ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಸಂಘಟಿಸಲಾಗಿದೆ ಎಂದರು.
ಕೃಷಿ ಪ್ರಧಾನವಾದ ಕೊಡಗಿನಲ್ಲಿ ಮಳೆಗಾಲದಲ್ಲಿ ಕೆಸರು ಗದ್ದೆ ಕ್ರೀಡಾಕೂಟಗಳು ಬಲು ಜನಪ್ರಿಯವಾಗಿವೆ. ಭತ್ತದ ಗದ್ದೆ ನಾಟಿ ಸಂದರ್ಭದಲ್ಲಿ ರೈತಾಪಿ ಜನರು ಒಂದೆಡೆ ಸೇರಿ ಸಹಬಾಳ್ವೆ ಹಾಗೂ ಮನೋರಂಜನೆಗಾಗಿ ನಡೆಸಿಕೊಂಡು ಬರುತ್ತಿರುವ ಕೆಸರು ಗದ್ದೆ ಕ್ರೀಡೆಯು ಜನಜನಿತವಾಗಿದ್ದು ಜನಪ್ರಿಯತೆ ಗಳಿಸಿದೆ ಎಂದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಎಸ್.ಡಿ.ಎಂ.ಸಿ.ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ ಮಾತನಾಡಿ, ನಮ್ಮ ಶಾಲಾ ಶಿಕ್ಷಕರ ತಂಡದ ಪ್ರೇರೇಪಣೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಇಂತಹ ಕ್ರೀಡಾಕೂಟ ಸಂಘಟಿಸುವ ಮೂಲಕ ಮಕ್ಕಳಿಗೆ ಕೃಷಿ ಪಾಠದ ಮಹತ್ವ ತಿಳಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಮಾತನಾಡಿ, ಪೂರ್ವಜರ ಕಾಲದಿಂದ ಬಂದಿರುವ ಇಂತಹ ದೇಸಿ ಕ್ರೀಡೆಗಳನ್ನು ಪರಿಚಯಿಸುವ ಕಾರ್ಯವನ್ನು ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮತ್ತು ಶಿಕ್ಷಕರ ತಂಡವು ಮಾಡಲಾಗುತ್ತಿದೆ. ದೇಸಿ ಕ್ರೀಡೆ ಉಳಿಸಿ-ಬೆಳೆಸುವ ಉದ್ದೇಶ ನಮ್ಮದು ಎಂದರು.
ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ಅಧ್ಯಕ್ಷ ಎಂ.ಜೆ.ರಜನೀಕಾಂತ್ ಮಾತನಾಡಿ, ಕೆಸರು ಗದ್ದೆಯಲ್ಲಿ ಮಕ್ಕಳ ಸಂಭ್ರಮವು ರೈತರ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿ ಎಂದರು.
ಗದ್ದೆಯಲ್ಲಿ ಮಕ್ಕಳೊಂದಿಗೆ ತೊಡಗಿಸಿಕೊಂಡಿದ್ದ ಜಿಲ್ಲಾ ಗೈಡ್ಸ್ ಸಂಸ್ಥೆಯ ಕ್ಯಾಪ್ಟನ್ ಸುಲೋಚನಾ ಮಾತನಾಡಿ, ಆಧುನಿಕ ಯುಗದಲ್ಲಿ ನಶಿಸುತ್ತಿರುವ ದೇಸಿ ಕ್ರೀಡೆಗಳನ್ನು ಉಳಿಸಿ-ಬೆಳೆಸಬೇಕಾಗಿದೆ ಎಂದರು.
ಕ್ರೀಡಾಕೂಟದಲ್ಲಿ ಕೂಡಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಬಿ.ಎನ್.ಸುಜಾತ, ಅನ್ಸಿಲಾ ರೇಖಾ, ಕೃಷಿಕ ಕೆ.ಆರ್ ನಾಗರಾಜು, ಗ್ರಾಮಸ್ಥರಾದ ಯಮುನ, ಗುರು, ಮುರುಳಿ ಇತರರು ಇದ್ದರು.
ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳಿಗೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಸಿ.ಎಂ.ಸುಲೋಚನ ಮತ್ತು ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೋಮಶೇಖರ್ ಕ್ರೀಡೆ ನಡೆಸಿಕೊಟ್ಟರು.
ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ಕಣ್ಮನ ಸೆಳೆದವು. ಒಂದೆಡೆ ಗೆಲ್ಲುವ ತವಕ, ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ಆಟದ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಸಖತ್ ಎಂಜಾಯ್ ಮಾಡಿದರು. ಕೆಸರಿನ ಗದ್ದೆಗಳಲ್ಲಿ ಧುಮುಕಿ ಮೈ ಚಳಿ ಬಿಟ್ಟು ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಓಟದ ಸ್ಪರ್ಧೆಯಲ್ಲಿ ಹಲವರು ಕೆಸರಿನಲ್ಲಿ ಬಿದ್ದರೂ ಎದ್ದು ಮತ್ತೆ ಓಡಿ ಗಮನ ಸೆಳೆದರು. ಜತೆಗೆ ಹಗ್ಗಜಗ್ಗಾಟವಂತೂ ಮೈನವಿರೇಳಿಸುವಂತಿತ್ತು.