ಮಡಿಕೇರಿ ಆ.19 : ಭಾಷೆ ಬೆಳೆದರೆ ಮಾತ್ರ ಸಂಸ್ಕೃತಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಭಾಷೆಯ ಬೆಳವಣಿಗೆಗೆ ಸಿನಿಮಾ ಕೂಡ ಒಂದು ಉತ್ತಮ ಮಾಧ್ಯಮವಾಗಿದೆ ಎಂದು ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಕಥೆ-ನಿರ್ದೇಶನದ “ಬೇರ್” (The Root) ಕೊಡವ ಸಿನಿಮಾದ ಪೋಸ್ಟರ್ ಮತ್ತು ಪ್ರೋಮೋ ಬಿಡುಗಡೆ ಸಮಾರಂಭ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆಯಿತು.
ಚಿತ್ರದ ಪ್ರೋಮೊ ಬಿಡುಗಡೆಗೊಳಿಸಿ ಮಾತನಾಡಿದ ಶಾರದಾ ನಂಜಪ್ಪ, ತಾಂತ್ರಿಕ ಲೋಕ ಪ್ರಗತಿ ಸಾಧಿಸಿರುವುದರಿಂದ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಿದೆ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಿನಿಮಾಗಳ ಅವಶ್ಯಕತೆ ಇದೆ ಎಂದರು.
ಇಂದಿನ ಯುವಕ ಯುವತಿಯರಿಗೆ ಸಂದೇಶ ನೀಡಲು ಸಿನಿಮಾ ಉತ್ತಮ ಮಾಧ್ಯಮವಾಗಿದ್ದು, ಕೊಡವರು ಕೊಡವ ಭಾಷಾ ಚಿತ್ರವನ್ನು ಅಭಿಮಾನದಿಂದ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕು. ಪೋಷಕರು ಕೊಡವ ಭಾಷೆ ಮತ್ತು ಕೊಡವ ಸಿನಿಮಾದ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸಬೇಕು, ಆ ಮೂಲಕ ಚಿತ್ರ ವೀಕ್ಷಿಸಲು ಪ್ರೇರಣೆ ನೀಡಬೇಕು. ಒಳ್ಳೆಯ ಚಿತ್ರಗಳನ್ನು ತಯಾರಿಸಿ ಕೊಡವಾಮೆಯನ್ನು ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.
ಬೇರ್ ಚಿತ್ರವು ಹೆಚ್ಚು ಪ್ರದರ್ಶನ ಕಂಡು ಜನಮನ್ನಣೆಗೆ ಪಾತ್ರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಹಿಂದಿನ ಕಾಲದಲ್ಲಿ ಒಂದು ಸಿನಿಮಾ ಮಾಡಲು ತುಂಬಾ ಕಷ್ಟ ಪಡಬೇಕಾಗಿತ್ತು. ಆದರೆ ಜನರ ಪ್ರೋತ್ಸಾಹ ಹೆಚ್ಚು ಇತ್ತು. ಪ್ರಸ್ತುತ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾದರು ಜನ ವೀಕ್ಷಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡವರು ಒಗ್ಗಟ್ಟಾಗಿ ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರಕ್ಕೂ ಹೆಚ್ಚು ಪ್ರೋತ್ಸಾಹ ನೀಡುವಂತಾಗಬೇಕು. ಕೊಡವ ಭಾಷೆಯಲ್ಲಿ ಹಲವು ಚಿತ್ರಗಳು ತೆರೆ ಕಾಣುತ್ತಿರುವುದು ಸಂತೋಷದ ವಿಚಾರ. ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ಮತ್ತಷ್ಟು ದೊಡ್ಡ ಮಟ್ಟದ ಚಿತ್ರಗಳು ನಿರ್ಮಾಣಗೊಂಡು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗಳಿಸುವಂತಾಗಲಿ ಎಂದು ಹಾರೈಸಿದರು.
ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾತನಾಡಿದ, ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ನಮ್ಮ ಮನೆಯಲ್ಲಿಯೇ “ಬೇರ್” ಸಿನಿಮಾ ಚಿತ್ರೀಕರಣಗೊಂಡಿದ್ದು, ಚಿತ್ರತಂಡ ಶಿಸ್ತಿನಿಂದ ಕಾರ್ಯನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿನಿಮಾದ ಮೂಲಕ ಕೊಡವಾಮೆಯನ್ನು ಮುಂದಕ್ಕೆ ತರಲು ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರಂತರ ಪ್ರಯತ್ನ ಮಾಡುತ್ತಿದ್ದು, ಕೊಡವ ಚಿತ್ರಗಳು ಮತ್ತಷ್ಟು ಬರುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿತ್ರದ ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಕೊಡವ ಸಂಸ್ಕೃತಿಯ ಜೊತೆಗೆ ಇತರ ಸಂಸ್ಕೃತಿಯನ್ನೂ ಉಳಿಸುವ ಕಾರ್ಯ ಮಾಡಬೇಕು. ಸಂಸ್ಕೃತಿಯ ಉಳಿವಿಗೆ ದೃಶ್ಯ ಮಾಧ್ಯಮ ಉತ್ತಮ ಸಾಧನವಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಪಡೆದ ವಿದ್ಯಾವಂತರೇ ದಾರಿತಪ್ಪುತ್ತಿದ್ದು, ಈ ಎಳೆಯನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಪೋಷಕರು ಹಾಗೂ ಯುವ ಪಿಳಿಗೆಯನ್ನು ಎಚ್ಚರಿಸಲಾಗಿದೆ ಎಂದು ತಿಳಿಸಿದರು.
ಎಲ್ಲರೂ ಸಂಘಟಿತರಾಗಿ ಹೊಸ ಹೊಸ ತಾಂತ್ರಿಕ ಪ್ರಯೋಗಗಳನ್ನು ಅಳವಡಿಸಿಕೊಂಡು ಮತ್ತಷ್ಟು ಎತ್ತರಕ್ಕೆ ಏರುವಂತಾಗಬೇಕು. ಸಿನಿಮಾ ರಂಗ ಜನರನ್ನು ತಲುಪಲು ಇರುವ ಉತ್ತಮ ಮಾಧ್ಯಮವಾಗಿದೆ. ತೆರೆಯ ಮೇಲೆ ಒಳ್ಳೆಯ ಸಂದೇಶ ನೀಡಿ ಸಮಾಜವನ್ನು ತಿದ್ದುವ ಕಾರ್ಯ ಮಾಡಲಾಗುತ್ತಿದೆ. ಚಿತ್ರರಂಗ ಯಾವುದೇ ಧರ್ಮ ಮತ್ತು ಭಾಷೆಗೆ ನೋವು ಆಗದಂತೆ ನೋಡಿಕೊಳ್ಳಬೇಕು ಎಂದರು.
ಇಂದಿನ ಯುವ ಪೀಳಿಗೆ ತಂದೆ, ತಾಯಿಯ ಮಾತು ಕೇಳದೆ ನಮ್ಮ ಆಚಾರ, ವಿಚಾರವನ್ನು ಮರೆತು ನಮ್ಮದಲ್ಲದ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಆಗುವ ಕಷ್ಟ, ನಷ್ಟ, ತಂದೆ, ತಾಯಿಯ ಸಂಕಟವನ್ನು “ಬೇರ್” ಚಿತ್ರದಲ್ಲಿ ವಿವರಿಸಲಾಗಿದೆ ಎಂದು ಪ್ರಕಾಶ್ ಕಾರ್ಯಪ್ಪ ಹೇಳಿದರು.
ಹಿರಿಯ ಕಲಾವಿದೆ ಮಂಡಿರ ಪದ್ಮ ಬೋಪಯ್ಯ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಹೆಚ್ಚು ಜಾಗೃತಗೊಳಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಹಾಗೂ ಚಿತ್ರನಟ ಬೊಳ್ಳಜಿರ ಬಿ.ಅಯ್ಯಪ್ಪ, “ಬೇರ್” ಚಿತ್ರದ ನಾಯಕ ಉಳುವಂಗಡ ಅಮಿತ್ ಬೋಪಣ್ಣ, ನಾಯಕಿ ಮೊಣ್ಣಂಡ ನೇಹಾ ಮೋಟಯ್ಯ ಉಪಸ್ಥಿತರಿದ್ದರು.
ಅಜ್ಜಮಕ್ಕಡ ವಿನುಕುಶಾಲಪ್ಪ ಪ್ರಾರ್ಥಿಸಿ, ಐಮಂಡ ರಶ್ಮಿ ಮೇದಪ್ಪ ಸ್ವಾಗತಿಸಿ, ಈರಮಂಡ ಹರಿಣಿ ವಿಜಯ್ ನಿರೂಪಿಸಿ, ಬೊಳ್ಳಜಿರ ಯಮುನಾ ಅಯ್ಯಪ್ಪ ವಂದಿಸಿದರು.
::: “ಕಂದೀಲು” ಪ್ರೀಮಿಯರ್ ಶೋ :::
“ಬೇರ್” ಚಿತ್ರದ ಪೋಸ್ಟರ್ ಮತ್ತು ಪ್ರೋಮೋ ಬಿಡುಗಡೆ ಸಮಾರಂಭದ ನಂತರ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಂಡ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಹಾಗೂ ನಿಮಾರ್ಪಕರಾದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶಿಸಿರುವ 2ನೇ ಕನ್ನಡ ಚಲನಚಿತ್ರ “ಕಂದೀಲು” ವಿನ ಪ್ರೀಮಿಯರ್ ಶೋ ನಡೆಯಿತು.
ಪತ್ರಕರ್ತ ಕುಡೆಕಲ್ ಸಂತೋಷ್ ಹಾಗೂ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಪ್ರೀಮಿಯರ್ ಶೋ ಗೆ ಚಾಲನೆ ನೀಡಿದರು. ಈ ಸಂದರ್ಭ ಚಿತ್ರದ ಕಲಾವಿದರು ಹಾಜರಿದ್ದರು.







