ಮಡಿಕೇರಿ ಆ.20 : ಮಡಿಕೇರಿ ರೋಟರಿ ವುಡ್ಸ್ ಮತ್ತು ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದ ಸಹಯೋಗದಲ್ಲಿ ನಗರದ ರೆಡ್ ಕ್ರಾಸ್ ಭವನದಲ್ಲಿ ಆಟೋ ಚಾಲಕರು ಹಾಗು ಮಾಲೀಕರಾಗಿ, ಆರೋಗ್ಯ ಶಿಬಿರ ಜರುಗಿತು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ್ ಆಚಾರ್ ಉದ್ಘಾಟಿಸಿ, ಮಾತನಾಡಿ , ದಿನದಲ್ಲಿ ಹತ್ತರಿಂದ ಹನ್ನೆರಡು ಗಂಟೆ ದುಡಿಯುವ ಆಟೋ ಚಾಲಕರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ದೈಹಿಕ ಚಟುವಟಿಕೆಗಳೂ ಈ ಸಂಧರ್ಭದಲ್ಲಿ ಅನಿವಾರ್ಯ. ಕನಿಷ್ಠ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಸೂಕ್ತ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ವಲಯ 6 ರ ಸಹಾಯಕ ಗವರ್ನರ್ ದೇವಣಿರ ತಿಲಕ್ ಪೊನ್ನಪ್ಪ , ರೋಗಪೀಡಿತರು ಮಾತ್ರ ತಪಾಸಣೆಗೆ ಒಳಗಾಗುವುದು ಎಂಬುದು ತಪ್ಪು ಅಭಿಪ್ರಾಯ. ಆಗಾಗ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದರು. ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ ಈ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳಿಂದ ಎಲ್ಲರಿಗೂ ಅನುಕೂಲ. ವರ್ಷದಲ್ಲಿ ನಾಲ್ಕೈದು ಬಾರಿ ಈ ಶಿಬಿರ ನಡೆಯುವಂತಾಗಲಿ ಎಂದು ಹಾರೈಸಿದರು.
ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಮಾತನಾಡಿ ರೋಟರಿಯ ಜಿಲ್ಲಾ ಯೋಜನೆಗಳಲ್ಲಿ ಒಂದಾಗಿರುವ ಆರೋಗ್ಯಸಿರಿ ಅಡಿಯಲ್ಲಿ ಈ ಉಚಿತ ಆರೋಗ್ಯ ಶಿಬಿರ ನಡೆಯುತ್ತಿದೆ. ಜನರಿಗೆ ಪ್ರಯೋಜನಕಾರಿ ಸೇವಾವೖತ್ತಿ ನಿವ೯ಹಿಸುತ್ತಿರುವ ಆಟೋಚಾಲಕರು, ಮಾಲೀಕರು, ಕುಟುಂಬ ವಗ೯ದವರಿಗಾಗಿ ಶಿಬಿರ ಆಯೋಜಿಸಲಾಗಿದೆ ಎಂದರು.
. ರೋಟರಿ ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ಮಡಿಕೇರಿ ವುಡ್ಸ್ ಕಾರ್ಯದರ್ಶಿ ಹರೀಶ್ ಕಿಗ್ಗಾಲು,ಖಜಾಂಜಿ ಧನಂಜಯ ಶಾಸ್ತ್ರೀ, ರೆಡ್ ಕ್ರಾಸ್ ಕಾರ್ಯದರ್ಶಿ ಹೆಚ್.ಆರ್.ಮುರಳೀಧರ್, ನಿದೇ೯ಶಕರುಗಳಾದ ಉತ್ತಯ್ಯ,ಮತ್ತು ಲೋಕೇಶ್ ಹಾಜರಿದ್ದರು. ರೋಟರಿ ಮಡಿಕೇರಿ ವುಡ್ಸ್ ನ ರವೀಂದ್ರ, ಕಶ್ಯಪ್, ರವಿಕುಮಾರ್, ಲೀಲಾವತಿ, ಮಿಸ್ಟಿ ಹಿಲ್ಸ್ ನ ಎಂ.ಧನಂಜಯ್, ಎ.ಕೆ.ಜೀವನ್ ಭಾಗವಹಿಸಿದ್ದರು.
ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳ ಪರೀಕ್ಷೆ, ಚರ್ಮರೋಗ ಪರೀಕ್ಷೆ ಗಳಿಗೆ ಸಂಬಂಧಿಸಿದ ವೈದ್ಯರು, ಹೃದ್ರೋಗ ತಜ್ಞರು ಹಾಗು ವೈದ್ಯಕೀಯ ಸಿಬಂಧಿಗಳು ಆರೋಗ್ಯ ತಪಾಸಣೆ ನಡೆಸಿ ಪರಿಹಾರಗಳನ್ನು ಸೂಚಿಸಿದರು. ನೂರ ಇಪ್ಪತ್ತಕ್ಕೂ ಹೆಚ್ಚು ಆಟೋ ಚಾಲಕರು ಹಾಗು ಮಾಲಿಕರು ಕುಟುಂಬವಗ೯ದವರು ಶಿಬಿರದ ಪ್ರಯೋಜನ ಪಡೆದುಕೊಂಡರು.









