ಮಡಿಕೇರಿ ಆ.20 : ಜನಪರವಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಗ್ರಾಮ ಗ್ರಾಮಗಳಿಗೆ ತಲುಪಿಸುವ ಮೂಲಕ ಕಾರ್ಯಕರ್ತರು ಜನರ ಭಾವನೆಗಳಿಗೆ ಸ್ಪಂದಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ.
ಸುಂಟಿಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಕೃತಜ್ಞತೆ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಗೆಲುವಿಗಾಗಿ ಶ್ರಮಿಸಿದಂತೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಪಂಚಾಯಿತಿ ಹಾಗೂ ಆಯಾ ಇಲಾಖೆಗಳ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಡಿ ಪ್ರತಿಯೊಬ್ಬ ಕಾರ್ಯಕರ್ತನು ಜನಪರವಾಗಿ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮಕ್ಕೆ ಗೆಲುವಿನ ಮೂಲಕ ಫಲ ಸಿಕ್ಕಿದೆ ಎಂದರು.
ಸುಂಟಿಕೊಪ್ಪ ಗ್ರಾ.ಪಂ ಗೆ ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಿವಮ್ಮ ಹಾಗೂ ಎಸ್.ಡಿ.ಪಿ.ಐ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪಂಚಾಯಿತಿ ಸದಸ್ಯೆ ರೇಷ್ಮ ಅವರನ್ನು ಶಾಸಕರು ಅಭಿನಂದಿಸಿ ಸನ್ಮಾನಿಸಿದರು.
ಸುಂಟಿಕೊಪ್ಪ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಡಾ.ಮಂತರ್ ಗೌಡ ಹಾಗೂ ಬ್ಲಾಕ್ ಅಧ್ಯಕ ವಿ.ಪಿ.ಶಶಿಧರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಜಿಲ್ಲಾ ಕಾಂಗ್ರೆಸ್ ಸದಸ್ಯ ಶಾಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಕುಮಾರ್, ಪಂಚಾಯಿತಿ ಸದಸ್ಯ ರಫೀಕ್, ಸುಂಟಿಕೊಪ್ಪ ಪಂಚಾಯಿತಿ ಮಾಜಿ ಅಧ್ಯಕ್ಷೆ ರೋಸ್ ಮೇರಿ, ಪರಿಶಿಷ್ಟ ಜಾತಿ ಅಧ್ಯಕ್ಷ ರವಿ, ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ, ಪ್ರಮುಖರಾದ ರಜಾಕ್, ವಿವಿಧ ಘಟಕಗಳ ಪಧಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.