ಮಡಿಕೇರಿ ಆ.20 : ಸಾಮಾಜಿಕ ಪರಿವರ್ತಕ ಹಾಗೂ ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸು ಕಾಲದ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಾಖಲೆಯ 135 ಸ್ಥಾನಗಳಲ್ಲಿ ಗೆಲವು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಅರಸರ ಹಾದಿಯಲ್ಲಿ ಈಗಿನ ಸರ್ಕಾರ ಸಾಗದಿದ್ದಲ್ಲಿ ಪರಿಣಾಮ ಕಷ್ಟವಾಗಬಹುದು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದ್ದಾರೆ.
ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಹಾಗೂ ಸಹಮತ ವೇದಿಕೆ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಡಿ.ದೇವರಾಜ ಅರಸರ 108ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
1972 ರಲ್ಲಿ 216 ವಿಧಾನಸಭಾ ಕ್ಷೇತ್ರಗಳಲ್ಲಿ 165 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೇವರಾಜ ಅರಸು ಅವರು ಇತಿಹಾಸ ಸೃಷ್ಟಿಸಿದರು. ಇದೀಗ ಕರ್ನಾಟಕದಲ್ಲಿ ಎರಡನೇ ಇತಿಹಾಸ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯದೆಲ್ಲೆಡೆ 26 ದಿನಗಳ ಕಾಲ ಪ್ರವಾಸ ಕೈಗೊಂಡು 36 ಸಭೆಗಳನ್ನು ನಡೆಸಿದರು. ಆದರೆ ಮೌನವಾಗಿಯೇ ಇದ್ದ ಮತದಾರ ಬದಲಾವಣೆಯನ್ನು ಬಯಸಿ ಕಾಂಗ್ರೆಸ್ ಗೆ 135 ಸ್ಥಾನಗಳನ್ನು ತಂದು ಕೊಟ್ಟಿದ್ದಾರೆ.
ಇದು ಎರಡನೇ ದಾಖಲೆಯಾಗಿದ್ದು, ಇದೀಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ದೇವರಾಜ ಅರಸು ಅವರ ಹಾದಿಯಲ್ಲೇ ಸಾಗಬೇಕು. ಜನರು ಕೂಡ ಇದನ್ನೇ ನಿರೀಕ್ಷೆ ಮಾಡುತ್ತಿದ್ದಾರೆ. ಸರ್ಕಾರ ಬೇರೆ ಹಾದಿ ಹಿಡಿದರೆ ಪರಿಣಾಮ ಕಷ್ಟವಾಗಬಹುದು ಎಂದು ನಾಣ್ಯಯ್ಯ ಅಭಿಪ್ರಾಯಪಟ್ಟರು.
ದೇವರಾಜ ಅರಸು ಅವರು ನನ್ನ ರಾಜಕೀಯ ಗುರು, ನನ್ನನ್ನು ಒತ್ತಾಯ ಮಾಡಿ ಚುನಾವಣೆಗೆ ನಿಲ್ಲಿಸಿದ ಪರಿಣಾಮ ನಾನು ವಿಧಾನಸಭೆ ಪ್ರವೇಶಿಸುವಂತಾಯ್ತು. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಜನಸಾಮಾನ್ಯರು ವಿಧಾನಸಭೆ ಪ್ರವೇಶಿಸಲಾಗದ ಕಾಲಘಟ್ಟದಲ್ಲಿ ಅರಸು ಅವರು ರಾಜ್ಯದ 216 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷ ಸಂಘಟಿಸುವ ಮೂಲಕ ಹೊಸ ರಾಜಕೀಯ ಮುಖಂಡರುಗಳಿಗೆ ಹಾಗೂ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ವಿಧಾನಸಭೆ ಪ್ರವೇಶಿಸುವಂತೆ ಮಾಡಿದರು ಎಂದು ನೆನಪಿಸಿಕೊಂಡರು.
ಭೂ ಸುಧಾರಣಾ ಕಾಯ್ದೆಯ ಮೂಲಕ ಬಡವರಿಗೆ ನ್ಯಾಯ ಒದಗಿಸಿದ ಅರಸು ಅವರು ಕಾಫಿ, ಕಿತ್ತಳೆ, ಕಾಳುಮೆಣಸು ರಬ್ಬರ್ ತೋಟದ ಬೆಳೆಗಾರರಿಗೆ ಕಾಯ್ದೆಯಿಂದ ವಿನಾಯಿತಿ ನೀಡಿದರು. ಇದರ ಪರಿಣಾಮ ಇಂದಿಗೂ ಕಾಫಿ ಬೆಳೆಗಾರರು ನೆಮ್ಮದಿಯಿಂದ ಇದ್ದಾರೆ ಎಂದರು.
ಜಿಲ್ಲೆಯಲ್ಲಿ ಇಂದು ಕೃಷಿಭೂಮಿ ಕೃಷಿಯೇತರವಾಗಿ ಪರಿವರ್ತನೆಯಾಗುತ್ತಿದೆ. ಹಿಂದೆ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರು ಭೂ ಪರಿವರ್ತನಾ ಕಾಯ್ದೆಯನ್ನು ಸಡಿಲಿಸಿದ ಪರಿಣಾಮ ಹೆಚ್ಚು ಹೆಚ್ಚು ಕೃಷಿಭೂಮಿ ಕೃಷಿಯೇತರವಾಗಿ ಪರಿವರ್ತನೆಯಾಗುತ್ತಿದೆ. ಎಲ್ಲೆಂದರಲ್ಲಿ ಬೆಟ್ಟಗುಡ್ಡಗಳನ್ನು ಅಗೆದು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. 2018 ರ ಮಳೆಗಾಲದಲ್ಲಿ ಇದರ ಪರಿಣಾಮವನ್ನು ಎದುರಿಸಿದ್ದೇವೆ. ಈ ಬೆಳವಣಿಗೆ ಅಪಾಯಕಾರಿಯಾಗಿದೆ ಎಂದು ನಾಣಯ್ಯ ಆತಂಕ ವ್ಯಕ್ತಪಡಿಸಿದರು.
ದೇವರಾಜ ಅರಸು ಅವರ ಹುಟ್ಟಿದ ಮನೆ ಮತ್ತು ಸಮಾಧಿಯನ್ನು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಸ್ಫೂರ್ತಿಯ ಕ್ಷೇತ್ರವನ್ನಾಗಿಸಬೇಕು. ಈಗಿನ ಕಾಂಗ್ರೆಸ್ ಸರ್ಕಾರ ದೊಡ್ಡ ಮಟ್ಟದಲ್ಲಿ ಸ್ಮಾರಕವನ್ನು ಅಭಿವೃದ್ಧಿಪಡಿಸಿ ಅರಸು ಅವರು ಯುವ ಜನಾಂಗಕ್ಕೆ ಮಾದರಿಯಾಗುವಂತೆ ನೋಡಿಕೊಳ್ಳಬೇಕು. ಆ ಮೂಲಕ ಅರಸು ಹೆಸರು ಅಮರವಾಗಬೇಕು ಎಂದರು.
::: ರಮೇಶ್ ಗೆ ಅಧಿಕಾರ ಸಿಗಲಿ :::
ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಅಹಿಂದ ಒಕ್ಕೂಟವನ್ನು ಬೆಳೆಸುತ್ತಾ ಬಂದಿರುವ ಟಿ.ಪಿ.ರಮೇಶ್ ಅವರು ಜನಪ್ರತಿನಿಧಿಯಾಗಿ ಅಧಿಕಾರಕ್ಕೆ ಬರಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಅವರು ಉನ್ನತ ಸ್ಥಾನಕ್ಕೇರಲಿ, ಶಾಸಕರಾಗಲಿ ಎಂದು ನಾಣಯ್ಯ ಆಶಿಸಿದರು.
ಸಹಮತ ವೇದಿಕೆಯ ಅಧ್ಯಕ್ಷ ಹಾಗೂ ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯವನ್ನು ನೀಡಿದರು, ಸಿದ್ಧಾಂತ ಮತ್ತು ಮೌಲ್ಯ ಇದ್ದರೆ ಮಾತ್ರ ಜನಸಾಮಾನ್ಯರಿಗೆ ಸಹಾಯ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಈ ರಾಷ್ಟ್ರ ನಿರ್ಮಾಣಗೊಂಡಿದ್ದು, ಮೇಲು, ಕೀಳು ಎನ್ನುವ ಮನೋಭಾವನೆಯಿಂದ ದೂರ ಉಳಿದು ನಾವೆಲ್ಲರೂ ಭಾರತೀಯರು ಎಂದು ಒಗ್ಗಟ್ಟಿನಿಂದ ಬದುಕಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ದೇವರಾಜು ಅರಸು ಅವರು ಸಾಮಾಜಿಕ ನ್ಯಾಯ ನೀಡಿದ ಕಾರಣ ಇಂದಿಗೂ ಅವರ ಹೆಸರು ಚಿರವಾಗಿದೆ. ಸಂಘರ್ಷವನ್ನು ಬಿಟ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ ಅವರು ದುರ್ಬಲರ ಶಕ್ತಿಯಾಗಿದ್ದರು. ಸಂಘರ್ಷದಿಂದ ನ್ಯಾಯ ಸಿಗಲು ಸಾಧ್ಯವಿಲ್ಲ, ಪ್ರತಿಯೊಬ್ಬರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ದೇವರಾಜ ಅರಸು ಅವರ ವಿಚಾರಧಾರೆಗಳನ್ನು ಪ್ರತಿಪಾದಿಸಬೇಕು ಎಂದು ರಮೇಶ್ ಕರೆ ನೀಡಿದರು.
::: ಸನ್ಮಾನ :::
ಮಹಿಳೋದಯ ಮಹಿಳಾ ಒಕ್ಕೂಟದ ಸಂಯೋಜಕಿ ಜಾಯ್ಸ್ ಮೆನೇಜಸ್, ತನಲ್ ವೃದ್ಧಾಶ್ರಮದ ಮೇಲ್ವಿಚಾರಕಿ ಬಿ.ಕೆ.ಶಶಿಕಲಾ, ಕೂರ್ಗ್ ಬ್ಲಡ್ ಫೌಂಡೇಶನ್ ನ ಪದಾಧಿಕಾರಿ ಎಂ.ಸಮೀರ್ ಹಾಗೂ ಸಮಾಜ ಸೇವಕ ಬಾಬುಚಂದ್ರ ಉಳ್ಳಾಗಡ್ಡಿ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಗರಸಭಾ ಸದಸ್ಯ ಬಿ.ವೈ.ರಾಜೇಶ್, ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ ಹಾಗೂ ಸಮಾಜ ಸೇವಕ ಎಂ.ಎಂ.ಯಾಕುಬ್ ಸನ್ಮಾನಿತರನ್ನು ಪರಿಚಯಿಸಿದರು.
ಸಹಮತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಉಪಸ್ಥಿತರಿದ್ದರು. ವೇದಿಕೆಯ ಪ್ರಮುಖ ಲಿಯಾಕತ್ ಆಲಿ ಪ್ರಾರ್ಥಿಸಿ, ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ ಸ್ವಾಗತಿಸಿ, ರೇವತಿ ರಮೇಶ್ ನಿರೂಪಿಸಿ, ಕಾರ್ಯಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ವಂದಿಸಿದರು.