ಸೋಮವಾರಪೇಟೆ, ಆ.21 : ಸಹೃದಯಿ, ಸ್ನೇಹಜೀವಿ, ಶಿಕ್ಷಕರ ಒಡನಾಡಿ, ಸದಾ ಹಸನ್ಮುಖಿ , ಕಾರ್ಯತತ್ಪರತೆ, ಸರಳ, ಸಜ್ಜನಿಕೆಯ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದು ಮೈಸೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆಗೊಂಡಿರುವ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಅವರಿಗೆ ಸೋಮವಾರಪೇಟೆ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಕಛೇರಿಯ ಅಧಿಕಾರಿಗಳು/ ಸಿಬ್ಬಂದಿ ವರ್ಗದ ವತಿಯಿಂದ ಸೋಮವಾರಪೇಟೆಯ ಬಿಇಓ ಕಛೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ಏರ್ಪಡಿಸಲಾಗಿದೆ.
ಸರಳತೆ ಮತ್ತು ಸಜ್ಜನಿಕೆ ಮೈಗೂಢಿಸಿಕೊಂಡಿರುವ ಕೆ.ವಿ.ಸುರೇಶ್ ಅವರ ಯೋಚನೆ ಮತ್ತು ಯೋಜನೆಯನ್ನು ಪ್ರತಿಯೊಂದರಲ್ಲೂ ಶಿಸ್ತುಬದ್ಧವಾಗಿ ಅಳವಡಿಸಿ ಕರ್ತವ್ಯ ನಿರ್ವಹಿಸಿದ್ದು, ಎಲ್ಲಾ ಅಧಿಕಾರಿ ಮತ್ತು ಶಿಕ್ಷಕರು, ಪೋಷಕರು ಹಾಗೂ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕೊಡಗು ಜಿಲ್ಲೆಗೆ 2002 ರಲ್ಲಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಆಗಮಿಸಿದ ಶ್ರೀ ಕೆ.ವಿ.ಸುರೇಶ್, ಆ ಶಾಲೆಯ ಸರ್ವಾಂಗೀಣ ಪ್ರಗತಿಗೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಿರತ ಶ್ರಮ ವಹಿಸಿ ಆ *ಮೊರಾರ್ಜಿ ಶಾಲೆಯನ್ನು ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿ ರೂಪಿಸುವ ಮೂಲಕ *ಮೊರಾರ್ಜಿ ಶಾಲೆಯ ಪ್ರಿನ್ಸಿಪಾಲ್ ಸುರೇಶ್ ಎಂಬ ಹೆಗ್ಗಳಿಕೆ ಪಾತ್ರರಾದರು.
ಆ ಶಾಲೆಯಲ್ಲಿನ ಕಟ್ಟಡದ ಭೌತಿಕ ಚಿತ್ರಣವನ್ನೇ ಬದಲಾಯಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಗಳಿಸಲು ಅಹರ್ನಿಶಿ ಶ್ರಮಿಸಿರುವುದು ಅನುಕರಣೀಯವಾದುದು. ಅಲ್ಲಿಂದ 2011 ರಲ್ಲಿ ಪ್ರಾಂಶುಪಾಲರ ಹುದ್ದೆಯಿಂದ ಮಡಿಕೇರಿಯ ಡಿಡಿಪಿಐ ಕಛೇರಿಗೆ ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ ಹೊಂದಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ 2013 ರಲ್ಲಿ ಕೊಡಗು ಜಿಲ್ಲೆಯ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ನಾಲ್ಕೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ 2018 ರ ಮಾರ್ಚ್ ನಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಿಇಓ ಆಗಿ ವರ್ಗಾವಣೆ ಹೊಂದಿದರು.
ನಂತರ 2018 ರ ನವೆಂಬರ್ ನಲ್ಲಿ ಮರಳಿ ಕೊಡಗು ಜಿಲ್ಲೆಯ ಕೂಡಿಗೆ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾಗಿ ನೇಮಕಗೊಂಡು ಸೇವೆ ಸಲ್ಲಿಸಿದರು. ಇದೇ ವೇಳೆ ಕೆಲವು ತಿಂಗಳ ಕಾಲ ಡಯಟ್ ನ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2022 ರ ಮಾರ್ಚ್ 9 ಕ್ಕೆ ಕೂಡಿಗೆ ಡಯಟ್ ನಿಂದ ಸೋಮವಾರಪೇಟೆ ತಾಲ್ಲೂಕಿನ ಬಿಇಓ ಆಗಿ ನೇಮಕಗೊಂಡು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಇಲ್ಲಿಂದ ಮೈಸೂರಿನ ಡಯಟ್ ಗೆ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆಗೊಂಡಿರುವ ಸುರೇಶ್ ಅವರಿಗೆ ತಾಲ್ಲೂಕಿನ ಎಲ್ಲಾ ಶಿಕ್ಷಕರ ಪರವಾಗಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಗುತ್ತಿದೆ.
ಉತ್ತಮ ವಾಗ್ಮಿ : ಕೊಡಗು ಜಿಲ್ಲೆಯಲ್ಲಿ ಎರಡು ದಶಕಗಳ ಕಾಲ ಉತ್ತಮ ಸೇವೆ ಸಲ್ಲಿಸುವ ಮೂಲಕ ಅವರ ಸೇವಾನಿಷ್ಠೆ, ಕಾರ್ಯತತ್ಪರತೆ, ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿಯಾಗಿರುವ ಶ್ರೀ ಸುರೇಶ್ ಉತ್ತಮ ವಾಗ್ಮಿ ಕೂಡ ಆಗಿದ್ದಾರೆ.
ವೃತ್ತಿ ಜೀವನ ಆರಂಭ: ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಂಚಗಾರಕೊಪ್ಪಲು ಗ್ರಾಮದವರಾದ ಶ್ರೀ ಸುರೇಶ್ 1999 ರಲ್ಲಿ ಕೆ.ಇ.ಎಸ್.ಪರೀಕ್ಷೆ ತೇರ್ಗಡೆ ಹೊಂದಿ ತಾವು ಓದಿದ ಕೆ.ಆರ್.ನಗರ ತಾಲ್ಲೂಕಿನ ಮಾವತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ವೃತ್ತಿ ಜೀವನ ಆರಂಭಿಸಿದ ಸುರೇಶ್ ಅವರು ಆ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಶಾಲೆಯ ಸರ್ವಾಂಗೀಣ ಪ್ರಗತಿಗೆ ಮೂರು ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸುವ ಮೂಲಕ ಹೆಸರು ಗಳಿಸಿರುತ್ತಾರೆ.
*ವರ್ಗಾವಣೆ ಒಂದು ರೀತಿ ಸಂತೋಷ ಹಾಗೂ ದುಃಖದ ಸಂಗತಿಯಾಗಿದೆ. ಮಾತೃ ಹೃದಯ ಹೊಂದಿರುವ ಅವರಲ್ಲಿ ಮಾನವೀಯತೆಯ ಮಮಕಾರ ಅಪಾರವಾಗಿದೆ.
ಕೊಡಗು ಜಿಲ್ಲೆಯ ಕುಶಾಲನಗರದ ಅಳಿಯರಾಗಿರುವ ಶ್ರೀಯುತ ಸುರೇಶ್ ಸರ್ ಅವರು ಅಪಾರ ಸ್ನೇಹಿತರು ಹಾಗೂ ಪೋಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ಇವರ ಮುಂದಿನ ವೃತ್ತಿ ಜೀವನವು ಉತ್ತಮವಾಗಲಿ ಮತ್ತು ಪದೋನ್ನತಿ ಹೊಂದುವ ಮೂಲಕ ಉತ್ತಮ ಅಧಿಕಾರಿಯಾಗಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಕಾರಣೀಕರ್ತರಾಗಲಿ ಎಂದು ಎಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ. ಶ್ರೀಯುತ ಕೆ.ವಿ.ಸುರೇಶ್ ಅವರ ಕುಟುಂಬ ಹಾಗೂ ಮಕ್ಕಳ ಭವಿಷ್ಯಕ್ಕೂ ಶ್ರೇಯಸ್ಸು ಲಭಿಸಲಿ ಎಂದು ಆಶಿಸಲಾಗಿದೆ.
ಕೃತಜ್ಞತೆಗಳು ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುವ ಸಂದರ್ಭದಲ್ಲಿ ತಮಗೆ ಸಹಕರಿಸಿದ ಎಲ್ಲರಿಗೂ ಹೃದಯಾಂತರಾಳದಿಂದ ಶ್ರೀ ಸುರೇಶ್ ಸರ್ ಕೃತಜ್ಞತೆ ಸಲ್ಲಿಸಿದ್ದಾರೆ.
ವರದಿ : ಟಿ.ಜಿ.ಪ್ರೇಮಕುಮಾರ್,
ಮುಖ್ಯ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,
ಕೂಡುಮಂಗಳೂರು(ಕೂಡ್ಲೂರು), ಕೊಡಗು ಜಿಲ್ಲೆ:
( ಮೊ: 9448588352)