ಮಡಿಕೇರಿ ಆ.21 : ಕೊಡಗು ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತಕ್ಕೆ, ಇಂದು ಮುಂಜಾನೆ ಸರ್ಕಾರಿ ಬಸ್ ಡಿಕ್ಕಿಯಾಗಿ ಪ್ರತಿಮೆ ಧರೆಗುರುಳಿದ ಘಟನೆ ನಡೆದಿದೆ.
ಸೋಮವಾರ ಮುಂಜಾನೆ 5.45 ರ ಸುಮಾರಿಗೆ ಕೆಎಸ್‍ಆರ್‍ಟಿಸಿ ಡಿಪೋದಿಂದ, ಬಸ್ ನಿಲ್ದಾಣಕ್ಕೆ ಸಾಗುತ್ತಿದ್ದ ಬಸ್, ಜನರಲ್ ತಿಮ್ಮಯ್ಯ ವೃತ್ತಕ್ಕೆ ಅಪ್ಪಳಿಸಿದೆ. ಈ ಸಂದರ್ಭ ಗ್ರಾನೈಟ್ ಕಂಬ ಸೇರಿದಂತೆ, ಸೇನಾನಿಯ ಪ್ರತಿಮೆ ನೆಲಕ್ಕುರುಳಿದೆ.
ಪುತ್ತೂರು ಡಿಪೋದ ಮಡಿಕೇರಿ ಉಪ ವಿಭಾಗಕ್ಕೆ ಸೇರಿದ ಬಸ್ ಜನರಲ್ ತಿಮ್ಮಯ್ಯ ವೃತ್ತದ ಬಳಿ ಬರುತ್ತಿದ್ದಂತೆಯೇ ಓಂಕಾರೇಶ್ವರ ದೇವಾಲಯ ರಸ್ತೆಯಿಂದ ಪಿಕ್ ಅಪ್ ವಾಹನವೊಂದು ಆಗಮಿಸಿದೆ. ಈ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಬಸ್ ಚಾಲಕ ದಾವಣಗೆರೆಯ ಕೊಟ್ರೇಗೌಡ ಬಸ್ ನ್ನು ಎಡಭಾಗಕ್ಕೆ ಚಲಾಯಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ಡಿವೈಡರ್ ಮೇಲೇರಿ ಜನರಲ್ ತಿಮ್ಮಯ್ಯ ವೃತ್ತಕ್ಕೆ ಡಿಕ್ಕಿ ಹೊಡೆದಿದೆ.
ದುರ್ಘಟನೆಯ ವೇಳೆ ಬಸ್ ನ ಮುಂಭಾಗದ ಎಡಬದಿ ಕುಳಿತ್ತಿದ್ದ ಅರಸೀಕೆರೆಯ ಪುಟ್ಟಸ್ವಾಮಿ(39) ಹೊರಕ್ಕೆಸೆಯಲ್ಪಟ್ಟು, ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ. ಚಾಲಕ ದಾವಣಗೆರೆಯ ಕೊಟ್ರೇಗೌಡ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬಸ್‍ನಲ್ಲಿ ಪ್ರಯಾಣಿಕರು ಇಲ್ಲದೆ ಇದ್ದುದರಿಂದ ಸಂಭವನೀಯ ಭಾರೀ ಅನಾಹುತ ತಪ್ಪಿದೆ.
::: ಸ್ಮಾರಕ ಭವನಕ್ಕೆ ಸ್ಥಳಾಂತರ :::
ಅವಘಡದ ಬಳಿಕ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಅವರ ಹುಟ್ಟಿದ ಮನೆ ಸನ್ನಿಸೈಡ್ ತಿಮ್ಮಯ್ಯ ಸ್ಮಾರಕ ಭವನದ ಆವರಣಕ್ಕೆ ಸ್ಥಳಾಂತರ ಮಾಡಲಾಯಿತು. ಈ ದುರ್ಘಟನೆಯಿಂದ ಪ್ರತಿಮೆಯ ಬೆನ್ನಿನ ಭಾಗದಲ್ಲಿ ನಾಲ್ಕು ರಂಧ್ರಗಳು ಉಂಟಾಗಿದ್ದು, ಕಾಲಿನ ಭಾಗಕ್ಕೂ ಅಲ್ಪ ಪ್ರಮಾಣದ ಹಾನಿಯಾಗಿದೆ.
::: ಶಾಸಕರ ಭೇಟಿ :::
ಘಟನಾ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಜಿಲ್ಲಾಧಿಕಾರಿ ವೆಂಕಟರಾಜ್, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್, ಮಡಿಕೇರಿ ಕೆಎಸ್‍ಆರ್‍ಟಿಸಿ ಡಿಪೋದ ವ್ಯವಸ್ಥಾಪಕಿ ಗೀತಾ, ನಗರಸಭೆ ಪೌರಾಯುಕ್ತ ವಿಜಯ, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಕೊಡವ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭೇಟಿ ನೀಡಿ ಪರಿಶೀಲಿಸಿದರು.
::: ಪ್ರತಿಮೆ ಮರು ಸ್ಥಾಪನೆ :::
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರು ಸ್ಥಾಪನೆ ಮಾಡಲಾಗುತ್ತ್ತದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ, ನಗರಸಭೆ ಮಾತ್ರವಲ್ಲದೇ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಹಾನಿಯಾಗಿರುವುದು ವಿಷಾದನೀಯ. ಜಿಲ್ಲೆಯ ಜನತೆಯೊಮದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ವೀರ ಸೇನಾನಿಯ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಗೌರವ ಪೂರ್ವಕವಾಗಿ ಮರು ಸ್ಥಾಪಿಸಲಾಗುವುದು ಎಂದು ತಿಳಿಸಿದರು.