ಮಡಿಕೇರಿ ಆ.24 : ಮಡಿಕೇರಿಯ ಮೆಡಿಕಲ್ ಕಾಲೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಆರೋಪಿ ಆಟೋ ಚಾಲಕನಲ್ಲ ಮತ್ತು ಆಟೋ ಚಾಲಕರ ಸಂಘದ ಸದಸ್ಯನೂ ಅಲ್ಲ. ಸ್ನೇಹಿತನಿಂದ ಆಟೋ ರಿಕ್ಷಾ ಪಡೆದು ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಆಟೋ ಮಾಲೀಕ, ಚಾಲಕರ ಸಂಘ ಸ್ಪಷ್ಟಪಡಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್.ಮೇದಪ್ಪ, ಇತ್ತೀಚಿನ ದಿನಗಳಲ್ಲಿ ಶೋಕಿಗಾಗಿ ಆಟೋ ಓಡಿಸುತ್ತಿರುವ ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಇದರಿಂದ ಆಟೋ ಚಾಲನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಚಾಲಕರು ತಲೆ ತಗ್ಗಿಸುವಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜ್ ಪ್ರಕರಣದಲ್ಲಿ ಆಟೋ ಚಾಲಕನೇ ಆರೋಪಿ ಎಂದು ಬಿಂಬಿತವಾದ ಹಿನ್ನೆಲೆ ಸಾರ್ವಜನಿಕ ವಲಯದಲ್ಲಿ ಆಟೋ ಚಾಲಕರ ಬಗ್ಗೆ ತಪ್ಪು ಅಭಿಪ್ರಾಯ ಮತ್ತು ಸಂಶಯ ಮೂಡುತ್ತಿದೆ. ಆದ್ದರಿಂದ ಸಂಘವು ಮುಂಜಾಗೃತಾ ಕ್ರಮವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.
ನಗರದಲ್ಲಿ ಕಳೆದ ಅನೇಕ ವರ್ಷಗಳಿಂದ ಆಟೋ ಮಾಲೀಕ, ಚಾಲಕರ ಸಂಘ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಕೊಡಗು ರಕ್ಷಣಾ ವೇದಿಕೆಯ ಆಟೋ ಚಾಲಕರ ಸಂಘದ ಘಟಕವೂ ಕಾರ್ಯೋನುಖವಾಗಿದೆ. ಈ ಎರಡು ಸಂಘಗಳಲ್ಲಿ ಯಾವುದಾರು ಒಂದರಲ್ಲಿ ಚಾಲಕರು ಸದಸ್ಯತ್ವ ಪಡೆಯದಿದ್ದಲ್ಲಿ ಅಂತಹವರಿಗೆ ಆಟೋ ಚಾಲಿಸಲು ಅವಕಾಶ ನೀಡುವುದಿಲ್ಲ ಮತ್ತು ಆಟೋ ನಿಲ್ದಾಣದಲ್ಲಿ ಆಟೋವನ್ನು ನಿಲುಗಡೆಗೊಳಿಸಲು ಬಿಡುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಂಡಿದ್ದು, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆಟೋ ನಿಲ್ದಾಣದಲ್ಲಿ ಮತ್ತು ಆಟೋ ರಿಕ್ಷಾಗಳಲ್ಲಿ ಸಂಘದ ಪದಾಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಹಾಕಲಾಗುವುದು. ಯಾವುದೇ ಆಟೋ ಚಾಲಕನಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅಥವಾ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಕರೆ ಮಾಡಿ ತಿಳಿಸಬಹುದು. ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಆಟೋ ರಿಕ್ಷಾವನ್ನು ಬಳಸಿಕೊಂಡು ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಟದಂತಹ ಅಕ್ರಮ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದಿದೆ. ನಾಲ್ಕು ಚಕ್ರದ ವಾಹನದ ಚಾಲನಾ ಪರವಾನಗಿಯನ್ನೇ ಬಳಸಿ ಆಟೋ ಚಾಲನೆಗೂ ಸಾರಿಗೆ ನಿಯಮದಲ್ಲಿ ಅವಕಾಶವಿದೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವು ಚಾಲಕರು ನಿಯಮ ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಇಡೀ ಆಟೋ ಚಾಲಕರ ಹೆಸರಿಗೆ ಕಪ್ಪು ಚುಕ್ಕೆ ಬರುತ್ತಿದೆ. ಖಾಕಿ ಶರ್ಟ್ ಧರಿಸದೆ ನಿಯಮ ಉಲ್ಲಂಘಿಸಲಾಗುತ್ತಿದೆ. ಜಾಲಿಗಾಗಿ, ಶೋಕಿಗಾಗಿ, ಕಾಲಹರಣಕ್ಕಾಗಿ ಆಟೋ ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಿಕೊಳ್ಳಲಾಗುವುದು.
ನಗರದಲ್ಲಿ 867 ಆಟೋರಿಕ್ಷಾಗಳಿದ್ದು, ಚಾಲಕರು ಕಡ್ಡಾಯವಾಗಿ ಸಂಘದ ಸದಸ್ಯತ್ವವನ್ನು ಪಡೆದರೆ ಸಂಘ ಕೂಡ ತಪ್ಪಿತಸ್ಥ ಚಾಲಕರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಬಹುದಾಗಿದೆ. ಈ ರೀತಿಯ ಕ್ರಮಗಳಿಂದ ನೈಜ ಆಟೋ ಚಾಲಕರು ನೆಮ್ಮದಿಯಿಂದ ಇರಬಹುದಾಗಿದೆ, ಅಲ್ಲದೆ ಸಾರ್ವಜನಿಕರು ಕೂಡ ನಿರಾತಂಕವಾಗಿ ಆಟೋ ರಿಕ್ಷಾಗಳಲ್ಲಿ ಸಂಚರಿಸಬಹುದಾಗಿದೆ ಎಂದು ಮೇದಪ್ಪ ಹೇಳಿದರು.
ಸಂಘದ ಮಡಿಕೇರಿ ನಗರಾಧ್ಯಕ್ಷ ಎ.ಅರುಣ್ ಕುಮಾರ್ ಮಾತನಾಡಿ ಕೆಲವು ಚಾಲಕರು ಮದ್ಯಪಾನ ಮಾಡಿ ಆಟೋ ಚಲಾಯಿಸುತ್ತಿರುವುದು ಕಂಡು ಬಂದಿದ್ದು, ಇವರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆಟೋ ರಿಕ್ಷಾವನ್ನು ಬೇರೆಯವರಿಗೆ ನೀಡಿ ತೊಂದರೆಗೆ ಸಿಲುಕಿದರೆ ಅದಕ್ಕೆ ರಿಕ್ಷಾ ಮಾಲೀಕನೇ ಹೊಣೆಯಾಗಬೇಕಾಗುತ್ತದೆ ಎಂದರು.
ಕೊಡಗು ರಕ್ಷಣಾ ವೇದಿಕೆಯ ಆಟೋ ಚಾಲಕರ ಸಂಘದ ಅಧ್ಯಕ್ಷ ಸುಲೈಮನ್ ಮಾತನಾಡಿ ಆಟೋ ರಿಕ್ಷಾದಲ್ಲಿ ಸಂಚರಿಸಲು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಚಾಲಕರಿಂದ ಅನುಚಿತ ವರ್ತನೆ ಕಂಡು ಬಂದಲ್ಲಿ ತಕ್ಷಣ ಪದಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಬಹುದು ಎಂದರು.
ಮೆಡಿಕಲ್ ಕಾಲೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆಟೋ ಚಾಲಕ ಬಾಲಚಂದ್ರ, ನನ್ನ ಆಟೋ ರಿಕ್ಷಾವನ್ನು ಆರೋಪಿ ದುರುಪಯೋಗ ಪಡಿಸಿಕೊಂಡಿದ್ದಾನೆ. ಇದೀಗ ಆಟೋ ಪೊಲೀಸರ ವಶದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎ.ಸಮದ್ ಹಾಗೂ ಕೊರವೇ ಸಂಘದ ಕಾರ್ಯದರ್ಶಿ ರಫೀಕ್ ಉಪಸ್ಥಿತರಿದ್ದರು.
Breaking News
- *ರಾಜಾಸೀಟು ಫಲಪುಷ್ಪ ಪ್ರದರ್ಶನದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಆಕರ್ಷಣೆ*
- *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣಾ ಶಿಬಿರ*
- *ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ : ಉತ್ತಮ ವೇತನ*
- *ಜ.25 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗಿಗೆ ಭೇಟಿ
- *ಜ.29 ರಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಭೆ*
- *ಪುಟಾಣಿ ವಿಜ್ಞಾನ ಪರೀಕ್ಷೆ : ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಕೊಡಗು ಔಷಧಿ ವ್ಯಾಪಾರಿಗಳ ಸಂಘದಿಂದ ರಕ್ತಸಂಗ್ರಹಣಾ ಶಿಬಿರ : ಔಷಧೀಯ ಅಂಶ ಹೊಂದಿರವ ರಕ್ತದ ದಾನಕ್ಕೆ ಸವ೯ರೂ ಮುಂದಾಗಿ : ಗುರುನಾಥ್ ಕರೆ*
- *ಬೇಟೋಳಿಯಲ್ಲಿ ಮಕ್ಕಳ ಗ್ರಾಮಸಭೆ*
- *ಜ.26 ರಂದು ಕೂಡಿಗೆಯಲ್ಲಿ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನ*
- *ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೂರ್ನಾಡು-ಸಿದ್ದಾಪುರ ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ*