ಮಡಿಕೇರಿ ಆ.25 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ವರಮಹಾಲಕ್ಷ್ಮಿ ಹಬ್ಬ ಹಾಗೂ ಆಜಾದಿಕ ಅಮೃತ ಮಹೋತ್ಸವದ ಪ್ರಯುಕ್ತ “ಮೇರ ಮಾಟಿ ಮೇರಾ ದೇಶ್” ಎಂಬ ಕಾರ್ಯಕ್ರಮ ನಡೆಯಿತು.
ನಗರದ ಜಿಲ್ಲಾ ಸಂಸ್ಥೆಯ ಕಚೇರಿಯಲ್ಲಿ ಕೊಡಗು ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್‍ನ ಆರು ಸ್ಥಳೀಯ ಸಂಸ್ಥೆಗಳಾದ ಮಡಿಕೇರಿ, ಸಂಪಾಜೆ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ, ಆಯಾಯ ಸ್ಥಳೀಯ ಸಂಸ್ಥೆಯಿಂದ ಸಂಗ್ರಹಿಸಿ ತಂದ ಮಣ್ಣನ್ನು ಜಿಲ್ಲಾ ಸಂಸ್ಥೆಯಲ್ಲಿ ಎಲ್ಲಾ ಮರು ಕಳಸದ ಮಣ್ಣನ್ನು ಒಟ್ಟು ಸೇರಿಸಿ ಒಂದು ಕಳಸಕ್ಕೆ ತುಂಬಿಸಿ ರಾಜ್ಯ ಸಂಸ್ಥೆಗೆ ಜಿಲ್ಲಾ ಪ್ರತಿನಿಧಿಯೊಂದಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯ ಕಚೇರಿ ಬೆಂಗಳೂರಿಗೆ ಕಳುಹಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಅವರು ಮಾತನಾಡಿ ಆಜಾದಿಕ ಅಮೃತ ಮಹೋತ್ಸವದ ಪ್ರಯುಕ್ತ “ನಮ್ಮ ಮಣ್ಣು ನಮ್ಮ ದೇಶ” ಎಂಬ ಧ್ಯೇಯ ವಾಕ್ಯದಂತೆ ಆರು ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಜಿಲ್ಲಾ ಕಚೇರಿಯ ಮಣ್ಣಿನೊಂದಿಗೆ ಒಟ್ಟು ಸೇರಿಸಿ ನಮ್ಮ ದೇಶದ ಪ್ರೀತಿ ಮತ್ತು ದೇಶ ಪ್ರೇಮದ ಗುರುತಾಗಿ ರಾಜ್ಯ ಸಂಸ್ಥೆಗೆ ಕಳುಹಿಸಿ ಅದನ್ನು ದೇಶದ ಮುಖ್ಯ ಕಚೇರಿಗೆ ಕಳುಹಿಸಲಾಗುವುದು. ಇದು ನಮ್ಮೆಲ್ಲರ ದೇಶ ಪ್ರೇಮದ ಗುರುತು ಮತ್ತು ಜವಾಬ್ದಾರಿ ಹೊಂದಿರುತ್ತದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವ ಪಲ್ಲದ್ ಮಾತನಾಡಿ, ದಿನನಿತ್ಯದ ಜೀವನಕ್ಕೆ ಆರೋಗ್ಯ ಹಾಗೂ ಜೀವನಾಂಶಕ್ಕೆ ಫಲವತ್ತಾದ ಈ ಮಣ್ಣೇ ನಮಗೆ ಆಶ್ರಯ. ಆದ್ದರಿಂದ ಈ ನೆಲವನ್ನು ಪೂಜಿಸಿ ಗೌರವಿಸಬೇಕು ಹಾಗೂ ಸೂಕ್ತ ರೀತಿಯಲ್ಲಿ ಕಾಪಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯ ಪರಿವೀಕ್ಷಕರಾದ ಕೆ.ಆರ್.ಬಿಂದು, ಜಿಲ್ಲಾ ಗೈಡ್ ಕಮೀಷನರ್ ಐಮುಡಿಯಂಡ ರಾಣಿ ಮಾಚಯ್ಯ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಗೈಡ್ ತರಬೇತಿ ಆಯುಕ್ತರಾದ ಮೈಥಿಲಿ ರಾವ್, ಸಹ ತರಬೇತಿ ಆಯುಕ್ತರಾದ ಪಿ.ಎಚ್.ಅಲೀಮಾ ಜಿಲ್ಲಾ ಸಂಘಟಕರಾದ ಯು.ಸಿ.ದಮಯಂತಿ, ಕುಶಾಲನಗರ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಸುಲೋಚನ, ಮಡಿಕೇರಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಮಾರ್, ಸ್ಕೌಟ್ಸ್ ಮಾಸ್ಟರ್ ಕುಟ್ಟಪ್ಪ, ಗೈಡ್ ಕ್ಯಾಪ್ಟನ್ ಗಾಯನ ಕೆ.ಎನ್. ಹಾಗೂ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಇತರರು ಇದ್ದರು.