ನಾಪೋಕ್ಲು ಆ.26 : ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿ ಎಂದು ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ನಿರ್ದೇಶಕ ಬಿದ್ದಾಟಂಡ ಮುತ್ತಣ್ಣ ಹೇಳಿದರು.
ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ, ಕ್ರೀಡಾಜ್ಯೋತಿಯನ್ನು ಬೆಳಗಿಸಿ, ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮನ್ನು ಒಂದಲ್ಲ ಒಂದು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು.ಶಿಕ್ಷಣದ ಮುಕ್ತಾಯದ ನಂತರ ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ಕ್ರೀಡೆ ಸಹಕಾರಿಯಾಗುತ್ತದೆ ಎಂದರು.
ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಕಲ್ಯಾಟಂಡ ಶಾರದಾ ಮಾತನಾಡಿ, ಪಠ್ಯ ದೊಂದಿಗೆ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳು ಅತ್ಯಗತ್ಯ. ಕ್ರೀಡೆಯಲ್ಲಿ ಸೋಲು,ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ ಆರೋಗ್ಯವಂತ ವಿದ್ಯಾರ್ಥಿಗಳು ದೇಶದ ಸಂಪತ್ತು. ಬದುಕಿನಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಕ್ಕಿಂತ ಎದುರಾಗುವ ಸವಾಲುಗಳನ್ನು ಎದುರಿಸಿದರೆ ಮುಂದಿನ ಹಾದಿ ಸುಗಮವಾಗುತ್ತದೆ ಎಂದರು.
ಈ ಸಂದರ್ಭ ವಲಯ ಮಟ್ಟದ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ಜರುಗಿ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ವಿದ್ಯಾರ್ಥಿ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿ ಪರಿಧಿ ಮುತ್ತಮ್ಮ ಪ್ರಾರ್ಥಿಸಿದರು.ದೈಹಿಕ ಶಿಕ್ಷಕಿ ಸರಿತಾ ಸ್ವಾಗತಿಸಿದರು. ಭಗವತಿ ಪ್ರಸಾದ ನಿರೂಪಿಸಿ ವಂದಿಸಿದರು.
ವೇದಿಕೆಯಲ್ಲಿ ಕೆಪಿಎಸ್ ಶಾಲಾ ಉಪ ಪ್ರಾಂಶುಪಾಲ ಶಿವಣ್ಣ, ರಾಮಟ್ರಸ್ಟ್ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬೊಪ್ಪಂಡ ಕುಶಾಲಪ್ಪ, ಅಪ್ಪಚೆಟ್ಟೋಳ ನವೀನ್. ಹಿರಿಯ ಶಿಕ್ಷಕಿ ಮುಂಡಂಡ ಕವಿತಾ ಇದ್ದರು.
ವಿವಿಧ ಶಾಲೆಗಳ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಕ್ರೀಡಾಕೂಟ ಸುಸೂತ್ರವಾಗಿ ನೆರವೇರಲು ಸಹಕರಿಸಿದರು .
ನಂತರ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ವಲಯ ಮಟ್ಟದ 14 ಶಾಲೆಗಳು ಭಾಗವಹಿಸಿದವು.
ವರದಿ : ದುಗ್ಗಳ ಸದಾನಂದ