ನಾಪೋಕ್ಲು ಸೆ.1 : ಪೋಷಕರ ಸಹಕಾರವಿದ್ದರೆ ಮಾತ್ರ ಮಕ್ಕಳು ಕ್ರೀಡೆಯಲ್ಲಿ ಉನ್ನತಿ ಹೊಂದಲು ಸಾಧ್ಯ ಎಂದು ಹಿರಿಯ ಕ್ರೀಡಾಪಟು ಅರೆಯಡ ಗಣೇಶ್ ಬೆಳ್ಯಪ್ಪ ಹೇಳಿದರು.
ಭಗವತಿ ಯುವಕ ಸಂಘದ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಕೈಲ್ ಮುಹೂರ್ತ (ಕೈಲ್‍ಪೊಳ್ದ್) ಹಬ್ಬದ ಕ್ರೀಡಾಕೂಟದ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕ್ರೀಡೆಯಲ್ಲಿ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವುದು ಮುಖ್ಯ. ಇಂತಹ ಕ್ರೀಡಾಕೂಟದಿಂದ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಾಧ್ಯ ಎಂದರು.
ನಿವೃತ್ತ ಉದ್ಯೋಗಿ ನಾಟೋಳಂಡ ರಮೇಶ್ ಭೀಮಯ್ಯ ಮಾತನಾಡಿ, ಮಾನಸಿಕವಾಗಿ,ಶಾರೀರಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯಕ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತಾಗಲು ತಂದೆ ತಾಯಿಯರ ಜವಾಬ್ದಾರಿ ಮುಖ್ಯ ಎಂದು ಹೇಳಿದರು.
ಗ್ರಾ.ಪಂ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ, ಶಾಲೆಯ ಆಟದ ಮೈದಾನದಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ಹಲವು ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ. ಎಲ್ಲರೂ ಒಗ್ಗೂಡಲು ಕ್ರೀಡೆ ಸಹಕಾರಿ ಎಂದರು.
ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟಿರ ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನಿವೃತ್ತ ರಾಜ್ಯ ಎಫೆಕ್ಸ್ ಬ್ಯಾಂಕ್ ಉದ್ಯೋಗಿ ಬೊಪ್ಪೆರ ಜಯ ಉತ್ತಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಆರ್ಎಂಸಿ ಮಾಜಿ ಅಧ್ಯಕ್ಷ ಶಿವಚಾಳಿಯಂಡ ಅಂಬಿಕಾರಿಯಪ್ಪ, ಗ್ರಾ.ಪಂ ಸದಸ್ಯ ಶಿವಚಾಳಿಯಂಡ ಜಗದೀಶ್, ವಿ.ಎಸ್.ಎಸ್.ಎನ್ ಮಾಜಿ ನಿರ್ದೇಶಕ ಕೆಲೇಟಿರ ಸಾಬು ನಾಣಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ವಿಜು ಪುವಯ್ಯ,ಶಿವಚಾಳಿಯಂಡ ಸುಭಾಷ್ ನಾಣಯ್ಯ, ಭಗವತಿ ಸಂಘದ ಕಾರ್ಯದರ್ಶಿ ಶಿವಾಚಾಳಿಯಂಡ ಕಿಶೋರ್ ಬೋಪಣ್ಣ ಉಪಸ್ಥಿತರಿದ್ದರು.
ಕ್ರೀಡಾಕೂಟದ ಅಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೆಲೇಟಿರ ದೇಚಮ್ಮ ಪ್ರಾರ್ಥನೆ ಗೈದ ಕಾರ್ಯಕ್ರಮ ಕಂಗಡ ಜಾಲಿ ಪುವಪ್ಪ ನಿರೂಪಿಸಿ ಅಜ್ಜೇಟಿರ ವಿಕ್ರಂ ವಂದಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.
ವರದಿ : ದುಗ್ಗಳ ಸದಾನಂದ