ನಾಪೋಕ್ಲು ಸೆ.1 : ಯವಕಪಾಡಿ ಹಾಗೂ ಮರಂದೋಡ ಗ್ರಾಮ ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ನೀರಿಲ್ಲದೆ ಸಮಸ್ಯೆ ಉಂಟಾಗಿದೆ.ಪೈರುಗಳು ಒಣಗುತ್ತಿದ್ದು, ಕೆರೆಗಳಿಂದ ನೀರು ಹಾಯಿಸಿ ಫೈರುಗಳನ್ನು ಉಳಿಸಿಕೊಳ್ಳುವ ಸ್ಥಿತಿ ಉದ್ಭವಿಸಿದೆ ಎಂದು ಈ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆ ಸುರಿಯುತ್ತಿತ್ತು.ಈ ಬಾರಿ ಒಂದು ಹನಿ ಮಳೆ ಬಿದ್ದಿಲ್ಲ.ಪ್ರತಿದಿನವೂ ಬಿಸಿಲು ಕಾಯುತ್ತಿದ್ದು ಇದ್ದ ಅಲ್ಪ ಸ್ವಲ್ಪ ನೀರಿನ ಪ್ರಮಾಣವು ಇಂಗುತ್ತಿದೆ. ಬೆಳಗ್ಗೆ ನೀರಿಲ್ಲದೆ ಸಮಸ್ಯೆ ಅನುಭವಿಸುವಂಥಾಗಿದೆ. ಸಂಬಂಧಪಟ್ಟ ಇಲಾಖೆಗಳು ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಿ ಕೊಡಬೇಕು ಎಂದು ರೈತ ಕಕ್ಕಬ್ಬೆ-ಕುಂಜಿಲ ಗ್ರಾ.ಪಂ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಒತ್ತಾಯಿಸಿದರು.
ಇದನ್ನು ಪರಿಗಣಿಸಿ ಮರಂದೋಡ ಗ್ರಾಮದ ರೈತರ ಗದ್ದೆಗಳಿಗೆ ಕೃಷಿ ಇಲಾಖೆ ಅಧಿಕಾರಿ ನಾರಾಯಣ ರೆಡ್ಡಿ, ಕಂದಾಯ ಪರಿರೀಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗ ಜನಾರ್ಧನ, ಭೇಟಿ ನೀಡಿ ಸಮೀಕ್ಷೆ ನಡೆಸಿ ಗ್ರಾಮದ ರೈತರಿಂದ ಮಾಹಿತಿ ಸಂಗ್ರಹಿಸಿದರು.
ವರದಿ : ದುಗ್ಗಳ ಸದಾನಂದ