ಮಡಿಕೇರಿ ಸೆ.1 : ಕೈಲ್ ಮುಹೂರ್ತ (ಕೈಲ್‍ಪೊಳ್ದ್) ಅಂಗವಾಗಿ ಮೇಕೇರಿಯಲ್ಲಿ ಸೆ.3 ರಂದು ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ.
ಮೇಕೇರಿಯ ಸ್ವಾಗತ ಯುವಕ ಸಂಘ, ಜಿಲ್ಲಾ ಯುವ ಒಕ್ಕೂಟ ಕೊಡಗು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಡಗು, ಯುವಸಬಲೀಕರಣ ನೆಹರು ಯುವಕೇಂದ್ರ, ಮಡಿಕೇರಿ ಮತ್ತು ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ 8.30 ರಿಂದ ಆಟೋಟ ಸ್ಪರ್ಧೆಗಳು ಜರುಗಲಿದ್ದು, ಸಾರ್ವಜನಿಕ ಪುರುಷರಿಗೆ ಬಲೂನಿಗೆ ಗುಂಡು ಹೊಡೆಯುವುದು, ಸಾರ್ವಜನಿಕ ಪುರುಷರಿಗೆ ಮತ್ತು ಮಹಿಳೆಯರಿಗೆ ಭಾರದ ಗುಂಡು ಎಸೆತ, 3ರಿಂದ 4 ವಷದೊಳಗಿನ ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವುದು, 4 ರಿಂದ 5.5 ವರ್ಷದೊಳಗಿನ ಮಕ್ಕಳಿಗೆ ಕಪ್ಪೆ ಕುಪ್ಪಳಿಸುವುದು, 1 ರಿಂದ 10ನೇ ತರಗತಿಗನುಗುಣವಾಗಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ 75 ಮೀ ಹಾಗೂ 100 ಮೀ ಓಟದ ಸ್ಪರ್ಧೆ, ಸಾರ್ವಜನಿಕ ಮಹಿಳೆಯರಿಗೆ ನಿಂಬೆ ಚಮಚ ಓಟ, ಸಂಗೀತ ಕುರ್ಚಿ, ಸಾರ್ವಜನಿಕ ಪುರುಷರಿಗೆ ರಸ್ತೆ ಓಟ, ಸ್ಲೋ ಬೈಕ್ ರೇಸ್, ಗೋಣಿಚೀಲ ಓಟ, 50 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಯಸ್ಕರ ಓಟ, ದಂಪತಿ ಓಟ, ರಿಲೇ ಓಟ, ಕಣ್ಣಿಗೆ ಬಟ್ಟೆಕಟ್ಟಿ ಮಡಿಕೆ ಹೊಡಯುವುದು, ವಾಲಗ ನೃತ್ಯ, ಗ್ರಾಮಸ್ಥ ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಮೇಕೇರಿಯ ಸ್ವಾಗತ ಯುವಕ ಸಂಘದ ಅಧ್ಯಕ್ಷ ಟಿ.ಎನ್ ಉಮೇಶ್ ತಿಳಿಸಿದ್ದಾರೆ.