ಮಡಿಕೇರಿ ನ.22 NEWS DESK : ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಮನವಿಗೆ ತಕ್ಷಣವೇ ಸ್ಪಂದಿಸಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಮಡಿಕೇರಿಯಿಂದ ದೇವಸ್ತೂರು ಕಾಲೂರು, ನಿಡವಟ್ಟು , ಬಾರಿ ಬೆಳ್ಳಚ್ಚು ಗ್ರಾಮಕ್ಕೆ ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿತ್ತು. ದೇವಸ್ತೂರಿನಿಂದ ಬಾರಿಬೆಳ್ಳಚ್ಚು ವರೆಗಿನ ಪ್ರದೇಶ ದುರ್ಗಮವಾಗಿದ್ದು, ವಿಪರೀತ ಮಳೆ ಹಾಗೂ ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಸಲುವಾಗಿ ಜೀಪ್ ಓಡಾಟ ಹೆಚ್ಚಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಹದಗೆಟ್ಟಿದ್ದರಿಂದ ಕಳೆದ ಮೂರು ದಿನಗಳಿಂದ ಬಸ್ ಅರ್ಧ ದಾರಿಗೆ ಮಾತ್ರ ಸಂಚರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಸುಮಾರು ಎರಡು ಕಿ.ಮೀ.ದೂರದಿಂದ ನಡೆದುಕೊಂಡು ಬಂದು ಬಸ್ ಹತ್ತಬೇಕಾಯಿತು. ಆದ್ದರಿಂದ ವಿದ್ಯಾರ್ಥಿಗಳೆಲ್ಲಾ ಸೇರಿ ಕಾಂಗ್ರೆಸ್ ಪ್ರಮುಖ ತೆನ್ನಿರ ಮೈನಾ ಅವರ ಮೂಲಕ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಮನವಿಯನ್ನು ಸಲ್ಲಿಸಿ, ತಮ್ಮ ಅಳಲನ್ನು ತೋಡಿಕೊಂಡರು. ಮಕ್ಕಳ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ಲೋಕೋಪಯೋಗಿ ಅಧಿಕಾರಿಗಳಿಗೆ ತಕ್ಷಣವೇ ರಸ್ತೆ ಸರಿಪಡಿಸಲು ಸೂಚನೆ ನೀಡಿದ ಹಿನ್ನಲೆ ಮಡಿಕೇರಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರಾದ ಗಿರೀಶ್ ಸಿಬ್ಬಂದಿ ವರ್ಗ ಹಾಗೂ ಗುತ್ತಿಗೆದಾರರೊಂದಿಗೆ ಸ್ಥಳಕ್ಕೆ ತೆರಳಿ ಕಾಮಗಾರಿ ವಿವರಗಳನ್ನು ನೀಡಿ ಮೂರು ದಿನಗಳಲ್ಲಿ ರಸ್ತೆ ದುರಸ್ತಿ ಪಡಿಸಲು ಕ್ರಮ ಕೈಗೊಂಡಿದ್ದಾರೆ. ಶಾಸಕರ ಕಾರ್ಯಕ್ಷಮತೆಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.