ಮಡಿಕೇರಿ ಸೆ.4 : ಕೊಡಗಿನ ಆಯುಧಪೂಜೆ ಎಂದೇ ಕರೆಯಲ್ಪಡುವ “ಕೈಲ್ ಪೊಳ್ದ್” ಹಬ್ಬದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರ ನರಮೇಧ ನಡೆದ ದೇವಟ್ ಪರಂಬುವಿನಲ್ಲಿ ಹಿರಿಯರನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿತು.
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಬುಡಕಟ್ಟು ಕೊಡವರ ಸಾಂಪ್ರದಾಯಿಕ ಹಬ್ಬಗಳ ಆಚರಣೆಯ ಸಂದರ್ಭ ಹಿರಿಯರನ್ನು ಸ್ಮರಿಸುವುದು ವಾಡಿಕೆ ಎಂದರು.
“ಕೆಳದಿ/ಪಾಲೇರಿ ರಾಯಲ್ಸ್ ಮತ್ತು ಹೈದರ್ ಮತ್ತು ಟಿಪ್ಪುವಿನ ಆಕ್ರಮಣದಿಂದ 32 ಕ್ಕೂ ಹೆಚ್ಚು ಬಾರಿ ಕೊಡವರು ರಾಜ್ಯವನ್ನು ಕಾಪಾಡಿದರು. ಆದ್ದರಿಂದ ತನ್ನ ಸೋಲಿನ ಸೇಡು ತೀರಿಸಿಕೊಳ್ಳಲು, ಟಿಪ್ಪು ಕೊಡವ ಬುಡಕಟ್ಟು ಜನಾಂಗವನ್ನು ವಂಚನೆಯ ಮೂಲಕ ಸಂಪೂರ್ಣವಾಗಿ ನಾಶ ಮಾಡಲು ಸಂಚು ರೂಪಿಸಿ ಹತ್ಯಾಕಾಂಡ ನಡೆಸಿದನು ಎಂದು ಆರೋಪಿಸಿದರು.
ಷಡ್ಯಂತ್ರಕ್ಕೆ ಬಲಿಯಾದ ಅಮಾಯಕ ಕೊಡವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು ಎಂದರು.
ಕೊಡವ ಬುಡಕಟ್ಟು ಜನಾಂಗದ ಸಮಗ್ರ ಸಬಲೀಕರಣಕ್ಕಾಗಿ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು, ಸ್ವಯಂ-ಆಡಳಿತ ಮತ್ತು ಎಸ್‍ಟಿ ಟ್ಯಾಗ್, ನಮ್ಮ ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಬುಡಕಟ್ಟು ಜನಾಂಗದ “ಸಂಸ್ಕಾರ ಗನ್”ಗೆ ಖಾತರಿ, ಕೊಡವ ಭೂಮಿ, ಭಾಷೆ , ಸಾಂಪ್ರದಾಯಿಕ ವೈಯುಕ್ತಿಕ ಕಾನೂನು, ಜಾನಪದ ಕಾನೂನು ವ್ಯವಸ್ಥೆಗಳಿಗೆ ಸಾಂವಿಧಾನಿಕ ಭದ್ರತೆ, ಕೊಡವ ಜನಾಂಗೀಯ ಗುರುತನ್ನು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಯುಎನ್‍ಒ ಗುರುತಿಸಬೇಕು. ದೇವಟ್ ಪರಂಬುವಿನಲ್ಲಿ ಪ್ರಾಣ ಕಳೆದುಕೊಂಡ ಕೊಡವರ ಸ್ಮರಣೆಗಾಗಿ ಅಂತರರಾಷ್ಟ್ರೀಯ ಮಟ್ಟದ ಸ್ಮಾರಕ ನಿರ್ಮಿಸಬೇಕು ಮತ್ತು ನರಮೇಧವನ್ನು ಯುಎನ್‍ಒ ಅಂತರರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಸಿಎನ್‍ಸಿ ಪ್ರಮುಖರಾದ ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಮಂದಪಂಡ ಮನೋಜ್ ಮತ್ತಿತರರು ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.







