ಮಡಿಕೇರಿ ಸೆ.11 : ಪ್ರಸಕ್ತ ಸಾಲಿನ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಾಕ್ಷರತಾ ಸಪ್ತಾಹ ಕಾರ್ಯಕ್ರಮವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಕೂಡಿಗೆ ಡಯಟ್ ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕರಾದ ಚಂದ್ರಕಾoತ್ ಅವರು ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿ.ಆರ್.ಪಿ. ಮಂಜುಳಾ ಚಿತ್ತಾಪುರ ಹಾಗೂ ಸಿ.ಆರ್.ಪಿ ವೃಂದದವರು ಸಾಕ್ಷರತಾ ಗೀತೆ ಹಾಡಿದರು. ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಪ್ರಾರ್ಥಿಸಿದರು. ವೇದಿಕೆಯಲ್ಲಿದ್ದ ಗಣ್ಯರು, ನವ ಸಾಕ್ಷರರು, ಶಾಲಾ ಮಕ್ಕಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಶಿಕಲಾ ಎಚ್.ಟಿ. ಅವರು ಪ್ರಾಸ್ತಾವಿಕ ನುಡಿಗಳನ್ನಾಡುವ ಮೂಲಕ ವಯಸ್ಕರ ಶಿಕ್ಷಣ ನಡೆದು ಬಂದ ಹಾದಿ ಹಾಗೂ ಕೊಡಗು ಜಿಲ್ಲೆಯ 2022-23 ನೇ ಸಾಲಿನ ಸಾಕ್ಷರತಾ ಭೌತಿಕ ಗುರಿ ಸಾಧನೆ ಮತ್ತು 2023-24 ನೇ ಸಾಲಿಗೆ ಸಿದ್ಧಪಡಿಸಿಕೊಂಡು ಅನುಷ್ಠಾನ ಮಾಡಲಿರುವ ಕಾರ್ಯಕ್ರಮಗಳ ಬಗ್ಗೆ, ಅಂತಾರಾಷ್ಟ್ರೀಯ ಸಾಕ್ಷರತಾ ಕಾರ್ಯಕ್ರಮದ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಶಿಕ್ಷಕರಾದ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಹಾಗೂ ವಯಸ್ಕರ ಶಿಕ್ಷಣದ ಮಹತ್ವ ಸಾರುವ ಕಿರು ನಾಟಕ ಪ್ರದರ್ಶನ ನೀಡಿದರು.
3 ಜನ ನವ ಸಾಕ್ಷರರಿಗೆ ಹಾಗೂ 3 ಜನ ಬೋಧಕರನ್ನು ಅಭಿನಂದಿಸಲಾಯಿತು. ನವ ಸಾಕ್ಷರರಾದ ಲೀಲಾ ಅವರು ಮಾತನಾಡಿ ಮಕ್ಕಳಿದ್ದಾಗ ಕಲಿಯುವ ಅವಕಾಶ ತಮಗೆ ಸಿಗಲಿಲ್ಲ. ಆದರೆ ಈಗ ವಯಸ್ಕರ ಶಿಕ್ಷಣದ ಮೂಲಕ ಸಾಕ್ಷರಸ್ಥಳಾಗಿದ್ದು, ಅತಿ ಹೆಚ್ಚು ಸಂತಸ ತಂದಿದೆ ಎಂದು ತಿಳಿಸಿದರು.
ಹಾಗೆಯೇ ತಮ್ಮ ಸುತ್ತಮುತ್ತಲಿನ ಅನಕ್ಷರಸ್ಥರಿಗೂ ಸಹ ಈ ಬಗ್ಗೆ ಅರಿವು ಮೂಡಿಸಿ ಸರ್ಕಾರದ ಈ ಯೋಜನೆಯ ಉಪಯೋಗ ಪಡೆದುಕೊಳ್ಳಲು ಉತ್ತೇಜಿಸುವುದಾಗಿ ತಿಳಿಸಿದರು.
ಈ ಸಂದರ್ಭ ಬೋಧಕರಾದ ಮೂರ್ನಾಡು ರಾಜೇಶ್ ಅವರು ಮಾತನಾಡಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಿ ನನಗೆ ಅತಿ ತೃಪ್ತಿತಂದಿದೆ ಎಂದು ಹೇಳಿದರು.
‘ಡಯಟ್ ಪ್ರಾಂಶುಪಾಲರಾದ ಎಂ.ಚoದ್ರಕಾoತ್ ಅವರು ಮಾತನಾಡಿ ಭಾರತ ದೇಶವು ಜನ ಸಂಖ್ಯೆಯಲ್ಲಿ ಮುಂದೆ ಇದೆ. ಆದರೆ ಎಲ್ಲಾ ಜನಸಂಖ್ಯೆ ಮಾನವ ಸಂಪನ್ಮೂಲ ಆಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುವವರೇ ನಿಜವಾದ ಮಾನವ ಸಂಪನ್ಮೂಲ. ಆದ್ದರಿಂದ ತಿಳಿದವರು ತಿಳಿಯದವರಿಗೆ ತಿಳಿಸುವ ಮೂಲಕ ನಿರಂತರ ಕಲಿಕೆಯಲ್ಲಿ ಕೈಜೋಡಿಸಿ ಕೊಡಗು ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.’
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯ ಪೊನ್ನಪ್ಪ, ಮಡಿಕೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿ.ಆರ್.ಸಿ. ಪ್ರಭಾರ ವಹಿಸಿಕೊಂಡಿರುವ ಗುರುರಾಜ, ಸಿ.ಆರ್.ಪಿ. ಗಳು, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ಶಾಲಾ ಮಕ್ಕಳು, ಉಪ ನಿರ್ದೇಶಕರ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕರಾದ ಕಿರಣ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಶಾಲಾ ಶಿಕ್ಷಣ ಇಲಾಖೆಯ ಸಿಆರ್‌ಪಿ ಉಷಾ ಅವರು ಸಾಕ್ಷರತಾ ಪ್ರಮಾಣ ವಚನ ಭೋದಿಸಿ, ಅಧಿಕಾರಿಗಳು ಶಾಲಾ ಮಕ್ಕಳು, ಶಿಕ್ಷಕರು, ಸಿಬ್ಬಂಧಿಗಳು, ಇತರರು ಒಳಗೊಂಡು ಪ್ರಮಾಣ ವಚನ ಸ್ವೀಕರಿಸಿದರು.
ಶಾಲಾ ಶಿಕ್ಷಣ ಇಲಾಖೆ ಬಿಆರ್‌ಪಿ ಮಂಜುಳ ಚಿತ್ತಾಪುರ ಅವರು ಸ್ವಾಗತಿಸಿದರು. ಶಾಲಾ ಶಿಕ್ಷಣ ಇಲಾಖೆಯ ಬಿಆರ್‌ಸಿ ಕಲ್ಪನಾ ಅವರು ವಂದಿಸಿದರು.











