ವಿರಾಜಪೇಟೆ ಸೆ.16 : ಐತಿಹಾಸಿಕ ಗೌರಿ ಗಣೇಶ ಹಬ್ಬವೂ ಎಂದಿನಂತೆ ಹಳೆ ವೈಭವದೊಂದಿಗೆ ನಡೆಯಲಿದೆ ಎಂದು ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಬರೀಶ್ ಶೆಟ್ಟಿ ತಿಳಿಸಿದರು.
ನಗರದ ಪುರಭವನದಲ್ಲಿ ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ವಿವಿಧ ಸಮಿತಿಗಳಿಗೆ ಗಣಪತಿ ಕೂರಿಸಲು ಏಕಗವಾಕ್ಷಿಯ ಮೂಲಕ ಅನುಮತಿ ನೀಡುವ ಸಲುವಾಗಿ ಕರೆಯಲಾಗಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಗೊಂದಲಗಳು ಬೇಡ ಈಗಾಗಲೇ ಶಾಸಕರು ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಬ್ಬದ ಸಂದರ್ಭಕ್ಕೆ ಆಗಬೇಕಾದ ವ್ಯವಸ್ಥೆಗಳಿಗೆ ಬೇಕಾದ ಸಿದ್ಧತೆಗಳಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಉಳಿದಂತೆ ಜನೋತ್ಸವ ಸಮಿತಿ ವತಿಯಿಂದಲೂ ಹಬ್ಬದ ರಂಗು ಹೆಚ್ಚಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ ಮಾತನಾಡಿ, ಡಿಜೆ ಬಳಕೆ ಮಾಡದಂತೆ ಇರುವ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಮಾಹಿತಿ ನೀಡಿದರು. ರಾತ್ರಿ ಹತ್ತರ ಬಳಿಕ ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಸೂಚನೆ ನೀಡಿದರು.
ಪುರಸಭೆ ಸದಸ್ಯೆ ದೇಚಮ್ಮ ಕಾಳಪ್ಪ ಉತ್ಸವದ ಕೊನೆಯ ದಿನ ವಿರಾಜಪೇಟೆಯ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಇದರಿಂದ ಅಕ್ಕ-ಪಕ್ಕದ ಹಳ್ಳಿಗಳಿಂದ ಉತ್ಸವ ನೋಡಲು ಸಾಧ್ಯವಾಗುವುದಿಲ್ಲ. ಈ ಬಾರಿ ಆಯಕಟ್ಟಿನ ಜಾಗಗಳಲ್ಲಿ ಬೇರೆ ಊರಿನಿಂದ ಬರುವ ಜನರಿಗೆ ಒಳ ಬರಲು ಹೊರ ಹೋಗಲು ವಾಹನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ರಚನ್ ಗೌರಿ-ಗಣೇಶ ಹಬ್ಬಕ್ಕೆ ವರ್ಷದಿಂದ ವರ್ಷಕ್ಕೆ ನಿಯಮಗಳನ್ನು ಬಿಗಿ ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಆಯೋಜಕರಿಗೆ ತೊಂದರೆಯಾಗುತ್ತಿದೆ. ಉತ್ಸವ ನಡೆಸಲು ಇಷ್ಟೆಲ್ಲಾ ನಿಯಮ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಉತ್ಸವ ಸಮಿತಿಯ ಆನಂದ್ ನಂಜಪ್ಪ, ಶ್ರೀಕಾಂತ್ ಶೆಟ್ಟಿ ಇವರುಗಳು ಉತ್ಸವ ನಡೆಸಲು ಅನುಮತಿ ಕೊಡಲು ಇಷ್ಟು ಕಟ್ಟುನಿಟ್ಟಿನ ಕ್ರಮಗಳು ಬೇಡ ಎನ್ನುವ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ವಂದಿಸಿದರು.
ವೇದಿಕೆಯಲ್ಲಿ ಪುರಸಭೆ ಸದಸ್ಯರುಗಳಾದ ರಂಜಿ ಪೂಣಚ್ಚ, ರಜನಿಕಾಂತ್, ಸುನೀತಾ ಜೂನಾ, ಫಸಿಹಾ ತಬಸುಮ್, ಪೃಥ್ವಿನಾಥ್, ಎಸ್.ಹೆಚ್.ಮತೀನ್ , ಸುಭಾಷ್ ಮಹಾದೇವ್ ಹಾಜರಿದ್ದರು.