ಕುಶಾಲನಗರ ಸೆ.30 : ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಹೊಂದುವ ಮೂಲಕ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಬೇಕೆಂದು ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಕರೆ ನೀಡಿದರು.
ಕುಶಾಲನಗರ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಗಾಲೋಟದಲ್ಲಿ ಓಡುತ್ತಿರುವ ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೂಡ ನಿರಂತರವಾಗಿ ಓಡಬೇಕು ಹಾಗೂ ಓದಬೇಕು ಎಂದು ಸಲಹೆ ನೀಡಿದರು.
ಕಾಲೇಜು ಎಂಬ ಸುಂದರ ದಿನಗಳನ್ನು ಅನ್ಯಥಾ ವ್ಯರ್ಥ ಮಾಡದೇ ಆ ಜೀವನವನ್ನು ವಿಭಿನ್ನ ಸಾಧನೆಗಳಿಗೆ ತೊಡಗಿಸಿಕೊಳ್ಳಬೇಕು. ಹೆತ್ತವರ ಶ್ರಮವನ್ನು ಅರ್ಥೈಸಿ ಅದಕ್ಕನುಗುಣವಾಗಿ ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಹೇಳಿದ ರಾಜೇಶ್ ಕೋಟ್ಯಾನ್, ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು, ಹದಿಹರೆಯದ ವಯಸ್ಸನ್ನು ನಿಯಂತ್ರಿಸುವ ಮೂಲಕ ಓಳಿತಿಗಾಗಿ ತೊಡಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಮಾತನಾಡಿ,
ಕೊಡಗು ಜಿಲ್ಲೆಗೆ ಮಾದರಿಯಾದ ವಿದ್ಯಾಸಂಸ್ಥೆಯನ್ನು ಕಟ್ಟುವ ದಿಸೆಯಲ್ಲಿ ಕಾಲೇಜಿನ ಬೋಧಕ ವೃಂದ ನಿರಂತರವಾಗಿ ಶ್ರಮಿಸುತ್ತಿದೆ. ಹಾಗಾಗಿ ಕಾಲೇಜಿನ ವಿದ್ಯಾರ್ಥಿಗಳು ವಿವಿ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಪದವಿ ವಿಭಾಗದ ಪ್ರಾಂಶುಪಾಲೆ ಲಿಖಿತಾ, ಪಿಯುಸಿ ವಿಭಾಗದ ಪ್ರಾಂಶುಪಾಲೆ ಕ್ಲಾರಾ ರೇಶ್ಮಾ, ಕಾಲೇಜಿನ ಅಧೀಕ್ಷಕ ಎನ್.ಎನ್.ನಂಜಪ್ಪ, ಆಡಳಿತಾಧಿಕಾರಿ ಮಹೇಶ್ ಅಮೀನ್ ಇದ್ದರು.
ವಿದ್ಯಾರ್ಥಿನಿ ಶಾಹಿರಾ ಸ್ವಾಗತಿಸಿದರು. ಅರಾಫತ್ ನಿರೂಪಿಸಿದರು. ಸಿಂಧೂ ವಂದಿಸಿದರು.









