ಶನಿವಾರಸಂತೆ ಅ.3 : ಮಠ ಮಾನ್ಯಗಳಿಂದ ಸಮಾಜದಲ್ಲಿ ಸಮಾನತೆ ಸಾಧಿಸಬಹುದು. ಇಲ್ಲಿ ಎಲ್ಲಾ ಜಾತಿ ಜನಾಂಗದವರು ಭಕ್ತರಾಗಿ ಆಗಮಿಸುವುದರಿಂದ ಮೇಲು- ಕೀಳು ಭಾವನೆ ಬರುವುದಿಲ್ಲ. ವಿದ್ಯೆ, ದಾಸೋಹ ಸೇವೆಗಳಲ್ಲೂ ಮಠಗಳ ಸೇವೆ ಅವಿಸ್ಮರಣೀಯ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಹೇಳಿದರು.
ಅಂಕನಹಳ್ಳಿ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ಶ್ರೀ ವೀರಭದ್ರೇಶ್ವರ ವರ್ಧಂತಿ ಮಹೋತ್ಸವ, ಗಣಪತಿ ವಿಸರ್ಜನೆ, ಶ್ರೀ ಗುರುಸಿದ್ದವೀರೇಶ್ವರ ತಿಂಗಳ ಮಹಾಮಂಗಳಾರತಿ, ಜ್ಞಾನದಾರೆ ಕಾರ್ಯಕ್ರಮದ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮನೆಹಳ್ಳಿ ಮಠಾಧ್ಯಕ್ಷ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ದೇವರೆಂದರೆ ಸತ್ಯ, ಸತ್ಯವೆಂದರೆ ನುಡಿದಂತೆ ನಡೆಯುವುದು ನಡೆದಂತೆ ನುಡಿಯುವುದು ಬಸವಣ್ಣನವರು ಜಗತ್ತಿಗೆ ಹಾಕಿಕೊಟ್ಟ ಜೀವನದ ದಾರಿದೀಪ್ತಿ, ಇವುಗಳೆಲ್ಲವನ್ನು ಆಚರಣೆಯಲ್ಲಿ ತಂದಾಗ ಮಾತ್ರ ಪ್ರತಿಫಲ ಸಿಗುತ್ತದೆ ಎಂದರು.
ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ವೀರಭದ್ರ ಸ್ವಾಮಿ ಸಾಕ್ಷಾತ್ ಶಿವನೇ ತೊಂದರೆ ಯಲ್ಲಿದ್ದಾಗ ರಕ್ಷಣೆಗೆ ಅವತರಿಸಿದ ದೈವ ಪುರುಷ, ದುಷ್ಟರ ಸಂಹಾರ- ಶಿಷ್ಯರ ರಕ್ಷಣೆ ಸರ್ವರಿಗೂ ಒಳಿತನ್ನು ಮಾಡುವ ದೇವರಾಗಿದ್ದು, ಕ್ಷಾತ್ರ ತೇಜಸ್ಸಿನ ಪ್ರತೀಕ. ಅನ್ಯಾಯ, ಅನಾಚಾರ, ಅಧರ್ಮಗಳ ವಿರುದ್ಧ ಹೋರಾಡಲು ಪ್ರೇರಣಾದಾಯಕನಾಗಿದ್ದು, ಆತನ ಆಕಾರವೇ ಅತ್ಯಂತ ವಿಸ್ಮಯ ಮತ್ತು ಪವಾಡ ಸದೃಶವಾಗಿದೆ ಎಂದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಸಹಭಾಗಿತ್ವದಲ್ಲಿ ವರ್ಧಂತಿ ಮಹೋತ್ಸವದ ಅಂಗವಾಗಿ ಮಠದ ಕ್ಷೇತ್ರ ದೈವ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ, ಉತ್ಸವ ನಡೆಯಿತು.
ದೊಡ್ಡಬಳ್ಳಾಪುರ ಮಠದ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ, ಕಲ್ಲು ಮಠಾಧೀಶ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠಾಧೀಶ ರುದ್ರಮುನಿ ಸ್ವಾಮೀಜಿ, ತಹಶೀಲ್ದಾರ್ ಎಸ್. ನರಗುಂದ, ಸಿದ್ದಗಂಗಾಮಠ ಬೆಂಗಳೂರು ಶಾಖೆ ಮಹಿಳಾ ಸಂಘಟನಾ ಘಟಕದ ಅಧ್ಕಕ್ಷೆ ಉಷಾಯೋಗಾನಂದ, ಸೋಮವಾರಪೇಟೆ ಮೋಟಾರು ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ಜಿ.ಸುರೇಶ್, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನೂ ಸೇರಿದಂತೆ ವಿವಿದ ಗ್ರಾಮಗಳ ವೀರಭದ್ರ ದೇವಾಲಯಗಳ ಅಧ್ಯಕ್ಷರುಗಳಿಗೆ, ಗೌರವ ಸಮರ್ಪಣೆ ಮಾಡಲಾಯಿತು.
ವೀರಶೈವ ಲಿಂಗಾಯತ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ.ದಿವಾಕರ್, ಮಾದ್ಯಮ ಕಾರ್ಯದರ್ಶಿ ಎನ್.ಎ.ಅಶ್ವಥ್ ಕುಮಾರ್, ಕಾರ್ಯದರ್ಶಿ ದಯಾನಂದ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಬಿ.ಜಯರಾಜ್, ತಾಲ್ಲೂಕು, ಹೋಬಳಿ ಘಟಕಗಳ ಸಮಿತಿ ಸದಸ್ಯರು ಇದ್ದರು.
ಕುಶಾಲನಗರ ಅಕ್ಕನ ಬಳಗದ ಮಹಿಳಾ ಸದಸ್ಯರು ವಚನ ಗೀತಗಾಯನ ನಡೆಸಿದರು.
ತಡರಾತ್ರಿ ಅಲಂಕೃತ ವಾಹನದಲ್ಲಿ ಕ್ಷೇತ್ರನಾಥ ಪುರಾತನ ವೀರಭದ್ರೇಶ್ವರ, ಗುರುಸಿದ್ದವೀರೇಶ್ವರ, ಗಣಪತಿ ದೇವರ ಮೂರ್ತಿಯನ್ನಿರಿಸಿ ಮಂಗಳವಾದ್ಯ ಘೋಷ, ವೀರಗಾಸೆ, ದುಗ್ಗಳ, ಚಾಮರ ಸೇವೆಯೊಂದಿಗೆ ವಿಜೃಂಭಣೆಯ ಉತ್ಸವ ಸಂಪನ್ನವಾಯಿತು. ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.








