ಮಡಿಕೇರಿ ಅ.3 : ಕರ್ನಾಟಕ ರಾಜ್ಯ ಸರ್ಕಾರಿ ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಕುಶಾಲನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಎಪಿಸಿಎಂ ಸಭಾಂಗಣದ ಜೈ ಭೀಮ್ ಸ್ಮರಣೆ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು, ದೇಶಕ್ಕೆ ವಿಶ್ವ ಶೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ ಎಂದು ತಿಳಿಸಿದರು.
ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಮಾತನಾಡಿ, ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿ ಹಲವು ಕ್ಷೇತ್ರಗಳಿಗೆ ಡಾ.ಅಂಬೇಡ್ಕರ್ ಅವರು ನೀಡಿದ ಕೊಡುಗೆ ಅಪಾರ ಎಂದರು.
ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ ಮಾತನಾಡಿ, ಅಸ್ಪೃಶ್ಯತೆ ಮತ್ತು ಅಸಮಾನತೆ ಅಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ನಿರಂತರ ಹೋರಾಟ ಮಾಡಿದ ಅಂಬೇಡ್ಕರ್ ಅವರು ದೇಶ ಕಂಡ ಮಹಾರತ್ನ ಎಂದು ಬಣ್ಣಿಸಿದರು.
ಪ್ರಾಣಿ-ಪಕ್ಷಿಗಳಿಗೆ ಜಾತಿ ಇದೆ, ಆದರೆ ಮಾನವರಿಗೆ ಜಾತಿ ಇಲ್ಲ ಎಂದು ಬುದ್ಧ ನುಡಿಯನ್ನು ಪುನರುಚ್ಚರಿಸಿದರು.
ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಶ್ರೀಬಂತೇಜಿ ಬೋಧಿದತ್ತಾತ್ರೇಯ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪಂಚಶೀಲ ತತ್ವವನ್ನು ಬೋಧಿಸಿದರು.
ಸರ್ಕಾರಿ ನೌಕರರ ಸಮನ್ವಯ ಸಮಿತಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಮಹೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್, ಬೆಂಗಳೂರು ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಮೋಹನ್, ಕೆಂಪ ಸಿದ್ಧಯ್ಯ, ಅಬಕಾರಿ ಜಂಟಿ ಆಯುಕ್ತ ಚಲವಾದಿ ಪಕೀರಪ್ಪ, ಕುಶಾಲನಗರ ಪುರಸಭೆಯ ಮಾಜಿ ಅಧ್ಯಕ್ಷ ಬಿ.ಜೈವರ್ಧನ್, ವಿರಾಜಪೇಟೆ, ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಅಧ್ಯಕ್ಷ ಟಿ.ಎಸ್.ಮಹೇಶ್, ಶಂಭು, ದಿನೇಶ್, ವಿಜಯಾನಂದ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಟಿ.ಎಸ್.ಮಹೇಶ್ ಸಂವಿಧಾನ ಪೂರ್ವ ಪೀಠಿಕೆ ವಾಚಿಸಿದರು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ ಡಿ ಓ.ಕೆ. ಎಂ ಚಂದ್ರಮೌಳಿ ಸ್ವಾಗತಿಸಿ, ಶಿಕ್ಷಕಿ ರಾಣಿ ರವೀಂದ್ರ ನಿರೂಪಿಸಿ, ಸಮಿತಿಯ ಸಂಘಟನಾ ಕಾರ್ಯದರ್ಶಿಪಿ ಡಿ ಓ ಹೆಚ್. ಡಿ ಹರೀಶ್ ವಂದಿಸಿದರು.
10ನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಎಸ್.ಸಿ, ಎಸ್.ಟಿ ಸಮುದಾಯದ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಿ ಪ್ರಶಂಸನಾ ಪತ್ರ ನೀಡಲಾಯಿತು.









