ನಾಪೋಕ್ಲು ಅ.3 : ಇಂದಿನ ಮಕ್ಕಳೇ ಮುಂದಿನ ಸಂಪತ್ತು ಆಗಿದ್ದು, ಮಕ್ಕಳು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬನೆಯ ಬದುಕು ಸಾಗಿಸಬೇಕು ಎಂಬ ಉದ್ದೇಶದಿಂದ ಹರ್ ಮಂದಿರ್ ಶಾಲೆಯನ್ನು ಸ್ಥಾಪಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಹೇಳಿದರು.
ಕಾಟಕೇರಿಯ ಹರ್ ಮಂದಿರ್ ಶಾಲಾ ವತಿಯಿಂದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ನಾಪೋಕ್ಲು ಮಹಿಳಾ ಸಮಾಜದಲ್ಲಿ ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದ್ದ ತಕಲಿ ಮತ್ತು ಚರಕ ದಿಂದ ನೂಲು ತೆಗೆಯುವ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹರ್ ಮಂದಿರ್ ಶಾಲೆಯು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. 19 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಾಲೆಯಲ್ಲಿ ಇಂದು 130 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಲಕ್ಷ ಕುಟುಂಬದವರಿಗೆ ಸಮುದಾಯ ಸಬಲೀಕರಣ ಮಾಡಬೇಕು ಎಂಬ ಉದ್ದೇಶವನ್ನು ಶಾಲೆ ಹೊಂದಿದೆ. ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುವುದರೊಂದಿಗೆ ಸಂತ ಹಾಗೂ ಸೈನಿಕ ಗುಣಗಳನ್ನು ಬೆಳಸಿಕೊಂಡು ಅತ್ಯುತ್ತಮ ನಾಯಕರಾಗಿ ಬೆಳೆಯಬೇಕು ಎಂದರು.
ಗಾಂಧೀಜಿಯವರು ಬ್ರಿಟಿಷರನ್ನು ಅವಲಂಬಿಸುವುದು ಬೇಡ ಎನ್ನುವ ಉದ್ದೇಶದಿಂದ ಸ್ವದೇಶಿ ಚಳುವಳಿಯನ್ನು ಆರಂಭಿಸಿದರು. ಸ್ವಾವಲಂಬಿ ಬದುಕಿನಿಂದ ಮುಂದಿನ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವ ಅಭಿಪ್ರಾಯ ಹೊಂದಿದ್ದರು. ಗಾಂಧೀಜಿ ಬಳಸುತ್ತಿದ್ದ ತಕಲಿ ಹಾಗೂ ಚರಕವನ್ನು ಇಂದು ಪ್ರದರ್ಶನ ಮಾಡಿ ಸ್ವಾವಲಂಬಿ ಬದುಕನ್ನು ಸಾಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಸುನಿಲ್ ಮಾತನಾಡಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಮಹಿಳಾ ಸಮಾಜದ ನಿರ್ದೇಶಕಿ ಪುಲ್ಲೆರ ಪದ್ಮಿನಿ, ಕೃಷಿ ಇಲಾಖೆಯ ಸಿಬ್ಬಂದಿ ಸಾಗರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರಾದ ಶರವಣ, ದಿನೇಶ್, ಮಹಿಳಾ ಸಮಾಜದ ಕಾರ್ಯದರ್ಶಿ ರಾಜೇಶ್ವರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.
ಶಾಲಾ ಶಿಕ್ಷಕ ಪ್ರದೀಪ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿ0ದ ತಕಲಿ ಮತ್ತು ಚರಕ ದಿಂದ ನೂಲು ತೆಗೆಯುವ ಪ್ರದರ್ಶನ ಸಾರ್ವಜನಿಕರಿ ಆಯೋಜಿಸಲಾಗಿತ್ತು.
ವರದಿ : ದುಗ್ಗಳ ಸದಾನಂದ









