ಮಡಿಕೇರಿ ಅ.3 : ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿಗೆ ನಗರಸಭೆ ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿ ಕೊಡಗು ರಕ್ಷಣಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು. ಸ್ಥಳಕ್ಕೆ ಆಗಮಿಸಿದ ಶಾಸಕ ಡಾ.ಮಂತರ್ ಗೌಡ ಅವರು ರಸ್ತೆ ದುರಸ್ತಿ ಸಂದರ್ಭ ಗುಣಮಟ್ಟ ಕಾಯ್ದುಕೊಳ್ಳುವ ಭರವಸೆ ನೀಡಿದರು.
ಕೊರವೇ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ನಗರದ ಗಾಂಧಿ ಮೈದಾನದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು. ನಗರದ ಜನತೆಗೆ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ನೀಡುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪವನ್ ಪೆಮ್ಮಯ್ಯ ಮಾತನಾಡಿ ನಗರದ ಎಲ್ಲಾ ರಸ್ತೆಗಳು ಹದಗೆಟ್ಟು ಹೊಂಡ ಗುಂಡಿಗಳಾಗಿವೆ, ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಚಾಲಕರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿದೆ. ಕೆಲವು ಬಡಾವಣೆಗಳಲ್ಲಿ ವಾಹನ ಸಂಚಾರವೇ ದುಸ್ತರವಾಗಿದೆ. ಹೊಂಡ ಗುಂಡಿಗಳಾದ ಅಶುಚಿತ್ವದ ರಸ್ತೆಗಳಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆಗಳ ಅಭಿವೃದ್ಧಿ ಮತ್ತು ದುರಸ್ತಿ ಬಗ್ಗೆ ಕಾಳಜಿ ತೋರದ ನಗರಸಭೆ ಕಳಪೆ ಕಾಮಗಾರಿ ಮೂಲಕ ಕಾಲ ಕಳೆಯುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ನಗರಸಭಾ ಅಧ್ಯಕ್ಷರು ಆಗಮಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರ ಅಹವಾಲು ಆಲಿಸಲು ಬಂದ ಪೌರಾಯುಕ್ತ ವಿಜಯ ಅವರು, ಈಗಾಗಲೇ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಆರಂಭಗೊಂಡಿದೆ. ಮಳೆಯಿಂದ ವಿಳಂಬವಾಗಿದೆ ಎಂದು ಸಮಜಾಯಿಷಿಕೆ ನೀಡಿದರು.
ಇದರಿಂದ ಪ್ರತಿಭಟನಾಕಾರರು ತೃಪ್ತರಾಗದಿದ್ದಾಗ ಸ್ಥಳಕ್ಕೆ ಬಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಗುಣಮಟ್ಟದ ಕಾಮಗಾರಿ ನಡೆಸುವ ಭರವಸೆ ನೀಡಿದರು.
ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ, ಅಗತ್ಯವಿರುವ ಕಡೆ ಹೊಸ ರಸ್ತೆಗಳನ್ನು ನಿರ್ಮಿಸಲಾಗುವುದು, ಸಂಪೂರ್ಣ ಡಾಂಬರೀಕರಣ ಮಾಡಲಾಗುವುದು. ಉಳಿದೆಡೆ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕರ ಭರವಸೆ ಹಿನ್ನೆಲೆ ಕೊರವೇ ಪ್ರಮುಖರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ಹೊಂಡ ಗುಂಡಿಗಳಾದ ರಸ್ತೆಗಳಲ್ಲಿ ಬಿದ್ದು ಗಾಯಗೊಂಡ ಮಾದರಿಯಲ್ಲಿ ಪ್ರತಿಭಟನಾಕಾರರು ಕೈ ಮತ್ತು ಕಾಲುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಅಣಕು ಪ್ರದರ್ಶನ ಮಾಡಿ ಗಮನ ಸೆಳೆದರು. ನಗರಸಭೆ ಎದುರು ಪ್ರತಿಭಟನೆ ನಡೆಸಿದ ಕೊರವೇ ಸದಸ್ಯರು ಕೆಲ ಹೊತ್ತು ರಸ್ತೆ ತಡೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಗೂಡ್ಸ್ ಟೆಂಪೋ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಜಿ.ವಿ.ಹರೀಶ್, ಕಾಫಿನಾಡು ಪ್ರವಾಸಿ ಕಾರು ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬ್ರಿಜೇಶ್, ಕೊರವೇ ಮಡಿಕೇರಿ ನಗರಾಧ್ಯಕ್ಷ ಚೊಟ್ಟೆಯಂಡ ಶರತ್, ನಿರ್ದೇಶಕ ಪಾಪು ರವಿ, ಲಾರಿ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಮಸೂದ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮೋಹನ್ ಬಿ.ಜಿ, ಕೊರವೇ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ವೈ.ಸುಲೈಮಾನ್, ಕೊರವೇ ಪ್ರಮುಖರಾದ ಪ್ರಕಾಶ್ ಅತ್ಯಾಡಿ, ಕಿರಿಯಮಾಡ ಮಿಲನ್, ಸಮೀರ್, ಬೊಳ್ತಂಡ ಸಜನ್, ಮಂಜುನಾಥ್, ಚಂದ್ರಕಾಂತ್ ಪಟೇಲ್, ಗಜೇಂದ್ರ, ವರ್ಗೀಸ್, ವಿನೋದ್ ಚೆದುಕಾರ್, ಜಿಲ್ಲೆಯ ವಿವಿಧ ಭಾಗಗಳ ಕೊರವೇ ಪದಾಧಿಕಾರಿಗಳು, ಆಟೋ ಚಾಲಕರು, ಲಾರಿ ಚಾಲಕರು, ಟ್ಯಾಕ್ಸಿ ಚಾಲಕರು ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









