ಮಡಿಕೇರಿ ಸೆ.4 : ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಾಳತ್ತಮನೆ, ಮೇಕೇರಿ, ಬಿಳಿಗೇರಿ ಅರ್ವತ್ತೋಕ್ಲು ಮೂಲಕ ಬೆಟ್ಟಗೇರಿ ಗೆ ಸಂಪರ್ಕಿಸುವ ರಸ್ತೆಯನ್ನು ಆಧುನೀಕರಿಸಲು ಲೋಕೋಪಯೋಗಿ ಇಲಾಖೆಗೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ನಿರ್ದೇಶನ ನೀಡಿದ್ದಾರೆ.
ಇಂದು ವಿಧಾನಸೌಧ ದಲ್ಲಿರುವ ಎ.ಎಸ್.ಪೊನ್ನಣ್ಣ ಅವರ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಮಡಿಕೇರಿಯಿಂದ ನಾಪೋಕ್ಲುವಿಗೆ ಪರ್ಯಾಯ ರಸ್ತೆಯ ಉದ್ದೇಶದಿಂದ ನಿರ್ಮಾಣಗೊಂಡ ಅರವತ್ತರ ದಶಕದ ಈ ರಸ್ತೆ ಕಡೆ ಗಣನೆಗೆ ಒಳಪಟ್ಟು ಗ್ರಾಮದ ಅನೇಕರು ಮಕ್ಕಳ ವಿಧ್ಯಾಭ್ಯಾಸದ ಸಲುವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿರುವುದನ್ನು ವಿವರಿಸಿದರು. ಅಲ್ಲದೆ ಸುಮಾರು ಐದು ಗ್ರಾಮಗಳಿಗೆ ಸೇರಿದ ನೂರಾರು ವಿಧ್ಯಾರ್ಥಿಗಳು, ಸಾರ್ವಜನಿಕರು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡಲು ಹರಸಾಹಸ ಪಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ತಾವು ಕೋವಿಡ್ ಸಂದರ್ಭದಲ್ಲಿ ಗ್ರಾಮಗಳ ಭೇಟಿ ಸಂದರ್ಭ ರಸ್ತೆಯ ಸ್ಥಿತಿಗತಿಗಳನ್ನು ಪ್ರತ್ಯಕ್ಷವಾಗಿ ಗಮನಿಸಿದ್ದು, ಸಾವಿರಾರು ಜನರ ಅನುಕೂಲಕ್ಕಾಗಿ ಈ ರಸ್ತೆಯನ್ನು ಉನ್ನತೀಕರಣ ಗೊಳಿಸಿ ಜಿಲ್ಲಾ ಮುಖ್ಯ ರಸ್ತೆಯಾಗಿ ( ಎಂ.ಡಿ.ಆರ್) ಮೇಲ್ದರ್ಜೆಗೆ ಏರಿಸಿ ಲೋಕೋಪಯೋಗಿ ರಸ್ತೆ ನಿರ್ಮಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಅರ್ವತ್ತೋಕ್ಲು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕಳೆದ ಎರಡು ದಶಕಗಳಿಂದ ಈ ರಸ್ತೆ ಅಭಿವೃದ್ದಿಗಾಗಿ ಹೋರಾಟ ಮಾಡಿದ್ದರು. ಐದು ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣವಾಗುವುದರೊಂದಿಗೆ ಹೋರಾಟಕ್ಕೆ ಜಯ ಲಭಿಸಿದೆ ಎಂದು ತೆನ್ನಿರ ಮೈನಾ ತಿಳಿಸಿದ್ದಾರೆ.








