ಮಡಿಕೇರಿ ಅ.5 : ಅರೆಭಾಷೆ ಗೌಡ ಸಮಾಜಗಳು ಹಾಗೂ ಸಮುದಾಯದ ಪ್ರಮುಖರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾಗಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದರು.
ಮದೆನಾಡಿನಲ್ಲಿರುವ ಸಂಘದ 13 ಏಕರೆ ಜಾಗಕ್ಕೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿದ್ದು, ಇವುಗಳಿಗೆ ಪರಿಹಾರ ಸೂಚಿಸುವಂತೆ ಅರೆಭಾಷೆ ಗೌಡ ನಿಯೋಗ ಮನವಿ ಮಾಡಿತು. ಅರೆಭಾಷೆ ಜನಾಂಗದ ಅಭಿವೃದ್ಧಿ ಮತ್ತು ಕಂದಾಯ ಇಲಾಖೆ ಸಮಸ್ಯೆಗಳ ಕುರಿತು ಗಮನ ಸೆಳೆಯಿತು.
ಇದೇ ಸಂದರ್ಭ ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಅವರು ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅರೆಭಾಷೆ ಗೌಡ ಸಮುದಾಯದವರಿಗೆ ಅವಕಾಶ ಮಾಡಿಕೊಡಬೇಕೆಂದು ಸಚಿವ ಕೃಷ್ಣ ಭೈರೇಗೌಡರಲ್ಲಿ ಮನವಿ ಮಾಡಿದರು.
ವಿರಾಜಪೇಟೆ ಶಾಸಕ ಪೊನ್ನಣ್ಣ ಅವರೊಂದಿಗೆ ಚರ್ಚಿಸಿದ ಅರೆಭಾಷೆ ಗೌಡ ಸಮಾಜಗಳ ಪ್ರಮುಖರು ತಲಕಾವೇರಿ ತೀರ್ಥೋದ್ಭವದ ಸಂದರ್ಭ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು. ಶಾಂತಿಯುತ ಹಬ್ಬ ಆಚರಣೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
13 ಏಕರೆ ಜಾಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ನಿಯೋಗದಲ್ಲಿದ್ದ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್, ಪ್ರಮುಖರಾದ ಪೈಕೇರ ಮನೋಹರ್, ಕುಯ್ಯಮುಡಿ ಮನೋಜ್, ಕೆದಂಬಾಡಿ ಋಷಿ ಚೆಟ್ಟಿಮಾನಿ, ತೇನನ ರಾಜೇಶ್, ಹುದೇರಿ ರಾಜೇಂದ್ರ, ಕೊಲ್ಯದ ಗಿರೀಶ್, ಸುರೇಶ್, ಭೀಷ್ಮ ಮಾದಪ್ಪ, ಮೋಹನ್ ದಾಸ್, ಅಂಬೇಕಲ್ ನವೀನ್, ದಂಬೆಕೋಡಿ ಆನಂದ, ನಂಗಾರು ನಾಣಯ್ಯ, ಪಾಣತ್ತಲೆ ಪಳಂಗಪ್ಪ, ಕೊಡಗನ ತೀರ್ಥ, ದೇವಂಗೋಡಿ ಹರ್ಷ, ಸೂರಜ್ ಹೊಸೂರು, ಅಮೆ ಸೀತಾರಾಮ್, ರವಿರಾಜ್ ಹೊಸೂರು, ಗಣಪಯ್ಯ ಗುಂಡಿಮಜಲು, ಸಂದೀಪ್ ಮುತ್ತಪ್ಪ ಮತ್ತಿತರ ಪ್ರಮುಖರು ನಿಯೋಗದಲ್ಲಿದ್ದರು.










