ಬೆಂಗಳೂರು, ಅ.9: ಹಿರಿಯ ಪತ್ರಕರ್ತ, ಖ್ಯಾತ ಬರಹಗಾರರಾಗಿದ್ದ ಜಿ.ಎನ್.ರಂಗನಾಥರಾವ್(81) ವಯೋಸಹಜ ಅನಾರೋಗ್ಯದಿಂದ ಇಂದು ಬೆಳಗ್ಗೆ ನಗರದ ಬಸವನಗುಡಿಯ ಬಿಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ 1942ರಲ್ಲಿ ಜನಿಸಿದ ಜಿ.ಎನ್.ರಂಗನಾಥ್ ರಾವ್ ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಆ ಬಳಿಕ ಅನುವಾದಕ, ಅಂಕಣಕಾರ, ಬರಹಗಾರ ಮಾತ್ರವಲ್ಲದೆ ಭಾರತೀಯ ವಿದ್ಯಾ ಭವನದಲ್ಲಿ ಪತ್ರಿಕೋದ್ಯಮದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಜಿ ಎನ್ ರಂಗನಾಥ ರಾವ್ ಮೃದು ಮಾತು ಹಾಗೂ ಸರಳತೆಗೆ ಹೆಸರಾಗಿದ್ದರು.
ಇವರು ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧಗಳನ್ನು ರಚಿಸಿದ್ದಾರೆ. ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ್ಣ ಹೆಜ್ಜೆ, ಅನ್ಯೋನ್ಯ, ಗುಣ- ದೋಷ ಮುಖ್ಯ ಇವು ಅವರ ವಿಮರ್ಶಾ ಕೃತಿಗಳು. ಇವಲ್ಲದೆ ಅನೇಕ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ ಹಾಗೂ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕುವೆಂಪು ಭಾಷಾಭಾರತಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ಟೀಎಸ್ಸಾರ್ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಸಾಹಿತ್ಯ ಪ್ರಶಸ್ತಿಗಳ ಸಹಿತ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.
ಸಿಎಂ ಸಂತಾಪ :: ಲೇಖಕ ಜಿ.ಎನ್.ರಂಗನಾಥರಾವ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಹಿರಿಯ ಲೇಖಕ, ಪತ್ರಕರ್ತ ಜಿ.ಎನ್. ರಂಗನಾಥ ರಾವ್ ಅವರ ನಿಧನದ ಸುದ್ದಿ ಆಘಾತವುಂಟುಮಾಡಿದೆ. ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡು ನುಡಿಯ ಉನ್ನತಿಗಾಗಿ ದುಡಿದಿದ್ದರು. ರಂಗನಾಥ ರಾವ್ ಅವರ ಅಗಲಿಕೆ ನಾಡಿನ ಪತ್ರಿಕಾರಂಗ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಿಬಾರದ ನಷ್ಟ.
ಮೃತರ ಆತ್ಮಕ್ಕೆ ಶಾಂತಿ ಮತ್ತು ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಮೂಖ್ಯಮಂತ್ರಿ ಹೇಳಿದ್ದಾರೆ.