ಮಡಿಕೇರಿ ಅ.10 : ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ ಅವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ನಗರಸಭಾ ಪೌರಾಯುಕ್ತರ ಮೇಲೆ ಹಲ್ಲೆಗೆ ಯತ್ನ ಆರೋಪದ ಹಿನ್ನೆಲೆಯಲ್ಲಿ ಪೌರ ಸೇವಾ ನೌಕರರ ಸೇವಾ ಸಂಘದಿಂದ ಕರ್ತವ್ಯಕ್ಕೆ ಹಾಜರಾಗದೆ ನಗರಸಭಾ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸರ್ಕಾರದ ಅಧೀನ ಕಾರ್ಯದರ್ಶಿಗಳೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದ ಸಂದರ್ಭ ಕಚೇರಿ ಪ್ರವೇಶಿಸಿದ ಸತೀಶ್ ಅವರು, ಫಾರಂ ನಂಬರ್ 3 ವಿಚಾರದಲ್ಲಿ ಪೌರಾಯುಕ್ತರೊಂದಿಗೆ ಕಲಹ ನಡೆಸಿದ್ದಾರೆ. ಅಲ್ಲದೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡಬಾರದು, ಶಿಸ್ತನ್ನು ಪಾಲಿಸಬೇಕು, ಸೌಜನ್ಯದಿಂದ ವರ್ತಿಸಬೇಕು, ಸತೀಶ್ ಅವರ ನಗರಸಭಾ ಸದಸ್ಯತ್ವ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ನಗರಸಭಾ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ನಿರತರಾದ ಕಾರಣ ಕಚೇರಿಗೆ ಬಂದ ಸಾರ್ವಜನಿಕರು ಅರ್ಜಿಗಳು ವಿಲೇವಾರಿಯಾಗದೆ ಮರಳಿದರು. ನಿತ್ಯ ನಗರಸಭೆಯಲ್ಲಿ ಒಂದಲ್ಲ ಒಂದು ಗೊಂದಲ, ಶೀತಲ ಸಮರಗಳು ನಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.











