ಮಡಿಕೇರಿ ಅ.17 : ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿಯಾಗಿರುವವರು ತಮ್ಮ ತಮ್ಮ ತಪ್ಪುಗಳನ್ನು ಅರಿತುಕೊಂಡು ಜೀವನದಲ್ಲಿ ಪರಿವರ್ತನೆಯಾಗುವ ಮೂಲಕ ಹೊಸ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜಿತ್ತಿ ಕರೆ ನೀಡಿದ್ದಾರೆ.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ದಿ ಆರ್ಗನೈಜ಼ೇಷನ್ ಫಾರ್ ದ ಡೆವಲಪ್‍ಮೆಂಟ್ ಆಫ್ ಪೀಪಲ್(ಒಡಿಪಿ) ಮೈಸೂರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಕಾರಾಗೃಹ, ಮಡಿಕೇರಿ, ಇವರುಗಳ ಸಹಯೋಗದೊಂದಿಗೆ ಜೈಲು ಕೈದಿಗಳ ಜೀವನೋಪಾಯ ಮತ್ತು ಪುನರ್ವಸತಿ ಯೋಜನೆಯಡಿ ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ಎಲೆಕ್ಟ್ರಿಷಿಯನ್ ಹಾಗೂ ಪ್ಲಂಬಿಂಗ್ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ನಡೆಯಿತು.
ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ನಿಮಗೆ ತಪ್ಪಿನ ಅರಿವಾಗಬೇಕು, ಜೀವನದಲ್ಲಿ ಸುಧಾರಣೆಯಾಗಬೇಕು, ನಿಮ್ಮ ಕುಟುಂಬದವರು ನೀವು ಹೊಸ ವ್ಯಕ್ತಿಗಳಾಗಿ ಹೊರ ಬರುವುದುದನ್ನು ಕಾಯುತ್ತಿದ್ದಾರೆ ಎಂದರು.
ಎಲೆಕ್ಟ್ರಿಷಿಯನ್ ಹಾಗೂ ಪ್ಲಂಬಿಂಗ್ ತರಬೇತಿ 1 ತಿಂಗಳು ಇಲ್ಲಿ ನಡೆಯುತ್ತಿದ್ದು, ಆಸಕ್ತಿ ವಹಿಸಿ ಕಲಿಯಬೇಕು. ನಾನು ನಿಮ್ಮನ್ನು ಹೊರಗಡೆ ನೋಡಿದಾಗ, ಸ್ವ-ಉದ್ಯೋಗ ನಡೆಸುತ್ತಾ ತಮ್ಮ ಕಾಲಮೇಲೆ ನಿಂತಿರುವ ಕಂಡರೆ ತರಬೇತಿ ನೀಡಿದ್ದು ಸಾರ್ಥಕತೆ ಪಡೆದಂತೆ ಎಂದು ಮನ:ಪೂರ್ವಕಾಗಿ ಮಾತನಾಡಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ರಮೇಶ್ ಬಾಬು ವಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತರಬೇತಿಯ ಮುಖ್ಯ ಉದ್ದೇಶ ನೀವು ಇಲ್ಲಿಂದ ಹೊರಹೋದ ನಂತರ ನಿಮ್ಮದೇ ಜೀವನ ಕಟ್ಟಿಕೊಂಡು ಸ್ವಾವಲಂಬಿ ಬದುಕು ಪಡೆದು ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ನೀವು ಸೋಲನ್ನು ಒಪ್ಪದೆ, ಜೀವನದಲ್ಲಿ ಎದ್ದೇಳಬೇಕು, ಅದಕ್ಕಾಗಿ ಈ ತರಬೇತಿ ನಿಮಗೆ ಅವಕಾಶ ಕಲ್ಪಿಸಿದೆ. ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಮೈಸೂರು ಒಡಿಪಿ ಸಂಸ್ಥೆಯ ನಿರ್ದೇಶಕರಾದ ಫಾದರ್. ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅವರು ಮಾತನಾಡಿ ನೀವು ಹೊರಬರುವುದನ್ನು ಕಾಯುತ್ತಿರುವ ನಿಮ್ಮ ಕುಟುಂಬದವರಿಗೆ, ನಂಬಿಕೊಂಡವರಿಗೆ ಆಸರೆಯಾಗಬೇಕು. ಒಳ್ಳೆಯ ಜೀವನ ನಡೆಸುವುದರ ಮೂಲಕ ಸಮಾಜದಲ್ಲಿ ಮಾದರಿಯಾಗಿರಿ. ಒಬ್ಬರಿಗೊಬ್ಬರು ಉಪಕಾರಿಗಳು ಹಾಗೂ ಸಹಕಾರಿಯಾಗಬೇಕು. ಬೇರೆಯವರಿಗೆ ಭಾರವಾಗಬಾರದು. ಇಲ್ಲಿ ಏರ್ಪಡಿಸಿರುವ ಕೌಶಲ್ಯ ತರಬೇತಿಯನ್ನು ಆಸಕ್ತಿಯಿಂದ ಕಲಿತು ನೀವು ಇಲ್ಲಿಂದ ಹೊರ ಹೋದ ಮೇಲೆ ಸ್ವಾವಲಂಬಿಯಾಗಿ ಜೀವನ ಸಾಗಿಸುವಂತಾಗಬೇಕು. ನೀವು ಪಡೆದ ತರಬೇತಿ ನಿಮ್ಮ ಜೀವನದಲ್ಲಿ ದಾರಿ ದೀಪವಾಬೇಕು. ನೀವು ಯಾವ ರೀತಿ ಕಲಿಯುತ್ತೀರೋ ಅದು ನಿಮ್ಮ ಮುಂದಿನ ಭವಿಷ್ಯವಾಗಬೇಕು. ನಿರಾಶವಾದಿಯಾಗದೆ ಆಶಾವಾದಿಗಳಾಗಿರಿ ಎಂದು ತಿಳಿಸಿದರು.