ಕುಶಾಲನಗರ, ಅ.20 : ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಇತಿಹಾಸ ಇದ್ದು, ಜಗತ್ತನ್ನೇ ಸೃಷ್ಟಿಸಿದ ಇತಿಹಾಸಗಳು ಇವೆ. ಅಲ್ಲದೆ ಎಲ್ಲಾ ಸಮಾಜಕ್ಕೂ ನಾಗರಿಕತೆ, ಸಂಸ್ಕಾರ, ಸಂಸ್ಕೃತಿ ಕಲಿಸಿಕೊಟ್ಟ ಸಮುದಾಯ ಎಂದರೆ ಅದು ವಿಶ್ವಕರ್ಮ ಸಮುದಾಯ ಎಂದು ಗೌಡಳ್ಳಿ – ಬೀಟಿಕಟ್ಟೆಯ ಗುರುಪಾದ ಶಿಲ್ಪಾಕಲಾ ಪ್ರಧಾನ ಶಿಲ್ಪಿ ಹಾಗೂ ಕಲಾವಿದ ಶಿಲ್ಪಿ ಮಂಜುನಾಥ್ ಆಚಾರ್ಯ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಹೆಬ್ಬಾಲೆ ಕಾಳಿಕಾಂಭ ದೇವಾಲಯ ಸಮಿತಿ ಆಶ್ರಯದಲ್ಲಿ ಹೆಬ್ಬಾಲೆ ಶ್ರೀ ಕಾಳಿಕಾಂಬ ದೇವಾಲಯದ ಆವರಣದಲ್ಲಿ
ದಿವಂಗತ ಪುಟ್ಟಮ್ಮ ಮತ್ತು ಹೆಬ್ಬಾಲೆ ದಿ.ನಂಜಾಚಾರ್ ಅವರ ಜ್ಞಾಪಕಾರ್ಥವಾಗಿ ಏರ್ಪಡಿಸಲಾಗಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಸಮಾಜಕ್ಕೆ ವಿಶ್ವಕರ್ಮರ ಕೊಡುಗೆಗಳು ” ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರಾಚೀನ ಕಾಲದಿಂದ ಬಂದ ವಿಶ್ವಕರ್ಮ ಪರಂಪರೆಯನ್ನು ನಾವು ಉಳಿಸುವತ್ತ ಚಿಂತನೆ ಮಾಡಬೇಕಿದೆ. ಚಿತ್ರಕಲೆ, ಶಿಲ್ಪಕಲೆ ಹೀಗೆ ಹಲವಾರು ಕರಕುಶಲ ಕಲೆ ಬಗ್ಗೆ ಜನರಿಗೆ ತಿಳಿಸಿದ ವಿಶ್ವಕರ್ಮವು ಕರ್ಮವನ್ನು ತೊಡೆದು ಹಾಕಿ, ಸನ್ಮಾರ್ಗದಿಂದ ನಡೆಯುಂತೆ ಜನರಲ್ಲಿ ಮಾರ್ಗದರ್ಶನ ಮಾಡಿದ್ದಾರೆ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜ ಇಂದು ಕುಶಲ ಕರ್ಮಿಗಳಾಗಿ ಸಮಾಜದಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಗುರುತಿಸಿಕೊಟ್ಟ ಏಕೈಕ ಸಮಾಜವೆಂದರೆ ಅದು ವಿಶ್ವಕರ್ಮ ಸಮಾಜ ಎಂದು ಮಂಜುನಾಥ್ ಆಚಾರ್ಯ ಬಣ್ಣಿಸಿದರು.
ಸಮಾಜದ ವೃತ್ತಿ ಪರ ಆಚರಣೆಗಳು ಇತರೆ ಸಮಾಜಕ್ಕೆ ಪೂರಕ, ಕೃಷಿ ಚಟುವಟಿಕೆಗಳು ರೈತರ ಬೆನ್ನೆಲುಬಾದರೆ ಕೃಷಿಕರಿಗೆ ವಿಶ್ವಕರ್ಮ ಸಮುದಾಯದ ಕುಲಕಸುಬುಗಳು ಆಧಾರವಾಗಿ ನಿಲ್ಲುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹೆಬ್ಬಾಲೆ ಗ್ರಾ.ಪಂ ಅಧ್ಯಕ್ಷೆ ಎಚ್.ಪಿ.ಅರುಣ ಕುಮಾರಿ, ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದದ್ದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್, ಕ.ಸಾ.ಪ.ವತಿಯಿಂದ ಕನ್ನಡ ನಾಡು – ನುಡಿ, ಕಲೆ, ಸಂಸ್ಕೃತಿ ಹಾಗೂ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಈ ದಿಸೆಯಲ್ಲಿ ಇಂದಿನ ಯುವ ಜನಾಂಗ ಇಂತಹ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ.ಸಾ.ಪ.ಸಮಿತಿ ನಿರ್ದೇಶಕ ಎಂ.ಎನ್.ವೆಂಕಟನಾಯಕ್,
ರಾಷ್ಟ್ರ ನಿರ್ಮಾಣಕ್ಕೆ ವಿಶ್ವಕರ್ಮರ ಕೊಡುಗೆ ಹಿರಿದು. ಇಂದು ತಂತ್ರಜ್ಞಾನ ಮುಂದುವರಿದಂತೆ ವಿಶ್ವಕರ್ಮರ ಜೀವನಶೈಲಿ ಬದಲಾದರೂ ಗ್ರಾಮೀಣ ಭಾಗದಲ್ಲಿ ಕುಲಕಸುಬುಗಳು ಜೀವಂತಿಕೆ ಪಡೆದಿರುವುದು ವಿಶ್ವಕರ್ಮ ಸಮುದಾಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಣ್ಣಿಸಿದರು.
ಜಿಲ್ಲಾ ಕ.ಸಾ.ಪ.ಸಮಿತಿ ನಿರ್ದೇಶಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ನಿವೃತ್ತ ಪ್ರಾಂಶುಪಾಲ ಎಚ್.ಎನ್.ನಾಗಾಚಾರಿ, ಹೆಬ್ಬಾಲೆ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಲ್. ರಮೇಶ್ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲರಾದ ಎಚ್.ಬಿ.ಲಿಂಗಮೂರ್ತಿ, ಕಾಳಿಕಾಂಭ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜುನಾಥ್, ಕ.ಸಾ.ಪ. ಹೆಬ್ಬಾಲೆ ವಲಯ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಕಾರ್ಯದರ್ಶಿ ಕವಿತಾ ಪುಟ್ಟೇಗೌಡ, ತಾಲ್ಲೂಕು ಕ.ಸಾ.ಪ.ಸಮಿತಿಯ ಗೌರವ ಕೋಶಾಧಿಕಾರಿ ಕೆ.ವಿ.ಉಮೇಶ್, ಸಂಘಟನಾ ಕಾರ್ಯದರ್ಶಿ ಸೂದನ ರತ್ನಾವತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಬಿ.ಸಾವಿತ್ರಿ, ಲೀಲಾಕುಮಾರಿ ತೊಡಿಕಾನ, ಎಚ್.ಎಂ.ವೆಂಕಟೇಶ್, ಡಿ.ಎಸ್.ಸೋಮಶೇಖರ್, ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಎಚ್. ರಾಚಾಚಾರಿ, ಭಜನಾ ಮಂಡಳಿಯ ಅಧ್ಯಕ್ಷೆ ಶೋಭಾರಾಣಿ, , ಎಚ್.ಆರ್.ನಂಜುಂಡಚಾರ್, ಎಚ್.ಬಿ.ದಿನೇಶಾಚಾರಿ, ಲೋಕನಾಥ್ ಇತರರು ಇದ್ಧರು.
ಉಪನ್ಯಾಸ ಕಾರ್ಯಕ್ರಮದ ನಂತರ ಭಜನಾ ಮಂಡಳಿಯ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಸಿಕೊಡಲಾಯಿತು.










