ಸೋಮವಾರಪೇಟೆ ಅ.20 : ಅರಳುತ್ತಿರುವ ಮುಗ್ದ ಮನಸಿನಲ್ಲಿ ಸಂಸ್ಕಾರ ಬಿತ್ತಿ ಬೆಳೆಸಿ ಎಂದು ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ ಭಟ್ ತಿಳಿಸಿದರು.
ಶರನ್ನವ ರಾತ್ರಿ ಅಂಗವಾಗಿ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಸರಸ್ವತಿ ಪೂಜೆಯಂದು ಮಕ್ಕಳಿಗೆ ಅಕ್ಷರಾಭ್ಯಾಸದ ಸಂದರ್ಭ ಮಾತನಾಡಿದರು.
ಮಕ್ಕಳಿಗೆ ಇಂದು ತಾಯಿ ಸರಸ್ವತಿಯ ಅನುಗ್ರಹದಿಂದ ಅಕ್ಷರ ಕಲಿಸುವ ಮೂಲಕ ಅವರ ಜೀವನದಲ್ಲಿ ಕಲಿಕೆಯ ಮುನ್ನುಡಿ ಬರೆಯು ತ್ತಿದ್ದೇವೆ. ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಬಹಳ ಕಾಳಜಿ ವಹಿಸಬೇಕು. ಮಕ್ಕಳು ತಾವು ಹೇಳಿಕೊಟ್ಟದ್ದನ್ನು ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ನೋಡಿ ಕಲಿಯುತ್ತಾರೆ ಆದ್ದರಿಂದ ತಂದೆ-ತಾಯಿಗಳು ಮನೆಯಲ್ಲಿ ಜಾಗೃತರಾಗಿರಬೇಕು ಹಾಗೂ ಒಳ್ಳೆಯ ಮಾತುಗಳನ್ನು ಆಡಬೇಕು. ಇದು ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಇಂದಿನ ಮಕ್ಕಳಲ್ಲಿ ಸಂಸ್ಕಾರ ಭಿತ್ತಬೇಕಾಗಿದೆ, ನಮ್ಮ ಆಚಾರ, ವಿಚಾರ ಕಲಿಸಬೇಕು ಆಗ ನಮ್ಮ ಸಂಪ್ರದಾಯ ಉಳಿಯುತ್ತದೆ ಎಂದು ಸಲಹೆ ನೀಡಿದರು.
ದೇವಾಲಯದ ಶಕ್ತಿ ಪಾರ್ವತಿ ದೇವಿಗೆ ಸರಸ್ವತಿ ಅಲಂಕಾರ ದೊಂದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.
ಈ ಸಂದರ್ಭ ಅರ್ಚಕರಾದ ರವಿಶಂಕರ್ ,ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ,ಕಾರ್ಯದರ್ಶಿ ವಿಜೇತ,ಸದಸ್ಯರುಗಳಾದ ಶ್ಯಾಮಸುಂದರ್, ಹರೀಶ್ ಹಾಗೂ ಮುಂತಾದವರು ಹಾಜರಿದ್ದರು.








