ಮಡಿಕೇರಿ ಅ.25 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ದಶಮಂಟಪಗಳ ಶೋಭಾಯಾತ್ರೆ ಸಂದರ್ಭ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪದ ಟ್ರ್ಯಾಕ್ಟರ್ ಮಗುಚಿಕೊಂಡ ಪರಿಣಾಮ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ.
ನಾಲ್ವರು ಗಾಯಾಳುಗಳು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಇವರಲ್ಲಿ ವಿದ್ಯುತ್ ದೀಪಾಲಂಕರಕ್ಕಾಗಿ ಬಂದಿದ್ದ ದಿಂಡಿಗಲ್ ನ ವ್ಯಕ್ತಿಯೊಬ್ಬರ ಕಾಲು ಮೂಳೆ ಮುರಿದಿದೆ. ಅದೃಷ್ಟವಶಾತ್ ಘಟನೆ ವೇಳೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತ್ತಾಗಿದೆ.
ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪವು ಈ ಬಾರಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿತ್ತು. ಶ್ರೀ ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ 6 ರಿಂದ 10ರವರೆಗಿನ ಕದಂಬ ಕೌಶಿಕೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತು. ಬಹುಮಾನಕ್ಕಾಗಿ ತೀರ್ಪುಗಾರರಿಗೆ ಬೆಳಗ್ಗೆ 4 ಗಂಟೆ ವೇಳೆಗೆ ಕಾವೇರಿ ಕಲಾಕ್ಷೇತ್ರದ ಬಳಿ ಕಥಾ ಸಾರಾಂಶವನ್ನು ಪ್ರದರ್ಶಿಸಬೇಕಾಗಿತ್ತು.
ರಾಜಾಸೀಟು ಉದ್ಯಾನವನದ ಬಳಿ ಇರುವ ತನ್ನ ದೇವಾಲಯದಿಂದ ಹೊರಟ ಮಂಟಪ ನಸುಕಿನ ವೇಳೆ 3.30ರ ಸುಮಾರಿಗೆ ಡಿಸಿಸಿ ಬ್ಯಾಂಕ್ ಮುಂಭಾಗದಿAದ ಸಾಗುತ್ತಿತ್ತು. ಈ ಸಂದರ್ಭ ಇಳಿಜಾರು ರಸ್ತೆಯಲ್ಲಿ ಎಡಬದಿಗೆ ವಾಲಿದ ಟ್ರಾö್ಯಕ್ಟರ್ ದಿಢೀರನೆ ಮಗುಚಿಕೊಂಡಿತು. ಟ್ರ್ಯಾಕ್ಟರ್ ನಲ್ಲಿದ್ದ ದೇವಿಯ ಬೃಹತ್ ಕಲಾಕೃತಿಗಳು ಹಾಗೂ ವಿದ್ಯುತ್ ಅಲಂಕೃತವಾದ ಎತ್ತರದ ಬೋರ್ಡ್ಗಳು ಕೂಡ ರಸ್ತೆಗೆ ಬಿದ್ದವು. ಘಟನೆ ವೇಳೆ ಗಾಯಗೊಂಡ ನಾಲ್ವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಸಂದರ್ಭೋಚಿತವಾಗಿ ಕಾರ್ಯಪ್ರವೃತ್ತರಾದ ಪೊಲೀಸರು, ಚೆಸ್ಕಾಂ, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ವಯಂ ಸೇವಕರು ಹಾಗೂ ಮಂಟಪ ಸಮಿತಿಯ ಪದಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಹೆಚ್ಚಿನ ಅಪಾಯ ಎದುರಾಗುವುದನ್ನು ತಪ್ಪಿಸಿದರು. ವಿದ್ಯುತ್ ಮಾರ್ಗದಲ್ಲಿ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಯಿತು. ಮಂಟಪದ ಬಳಿ ನೆರೆದಿದ್ದ ಸಾವಿರಾರು ಜನರು ದೊಡ್ಡ ಅನಾಹುತದಿಂದ ಪಾರಾದರು.
ದಶಮಂಟಪಗಳ ಶೋಭಾಯಾತ್ರೆಯಲ್ಲಿ ಹರ್ಷೋದ್ಘಾರದೊಂದಿಗೆ ಕುಣಿದು ಸಂಭ್ರಮಿಸುತ್ತಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮಂದಿ ಅನಿರೀಕ್ಷಿತವಾಗಿ ನಡೆದು ಹೋದ ಈ ಘಟನೆಯಿಂದ ಆತಂಕಗೊಂಡರು. ಹಲವರಲ್ಲಿ ಬೇಸರದ ಛಾಯೆ ಮೂಡಿತು. ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪ ಸಮಿತಿಯ ಸದಸ್ಯರುಗಳು ತಮ್ಮ ಮೂರು ತಿಂಗಳ ಪರಿಶ್ರಮ ವ್ಯರ್ಥವಾದ ಬಗ್ಗೆ ಘಟನೆ ನಡೆದ ಸ್ಥಳದಲ್ಲಿ ಕಣ್ಣೀರು ಹಾಕಿದರು. ಆದರೆ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎನ್ನುವ ತೃಪ್ತಿಯನ್ನು ಪಟ್ಟುಕೊಂಡರು.










