ಮಡಿಕೇರಿ ಅ.25 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಹತ್ತು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಕರ್ಷಕ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ವರ್ಣರಂಜಿತ ತೆರೆ ಬಿದ್ದಿದೆ.
ಈ ಬಾರಿ ದಶಮಂಟಪಗಳಲ್ಲಿ “ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆ” ಕಥಾ ಸಾರಾಂಶ ಹೊಂದಿದ್ದ ಶ್ರೀಕೋದಂಡ ರಾಮ ದೇವಾಲಯದ ಮಂಟಪ ಪ್ರಥಮ ಬಹುಮಾನ ಗಳಿಸಿತು.
49ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡ ಈ ದೇವಾಯದ ಮಂಟಪದ ಅಧ್ಯಕ್ಷರಾಗಿ ಗೋಪಿನಾಥ್ ಕಾರ್ಯನಿರ್ವಹಿಸಿದರು. ಸುಮಾರು ರೂ.20 ಲಕ್ಷ ರೂ.ವೆಚ್ಚದ ಮಂಟಪ 25 ಕಲಾಕೃತಿಗಳನ್ನು ಹೊಂದಿತ್ತು.
“ಮಹಾಗಣಪತಿಯಿಂದ ಶತಮಾಹಿಷೆಯ ಸಂಹಾರ” ಕಥಾ ಸಾರಾಂಶವನ್ನು ಹೊಂದಿ 47ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡ ಶ್ರೀಕೋಟೆ ಮಹಾಗಣಪತಿ ದೇವಾಲಯದ ಮಂಟಪ ಹಾಗೂ 48ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡು “ಕೃತಿಬಾಸ ರಾಮಾಯಣದಿಂದ ಆಯ್ದ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ವಧೆ” ಕಥಾ ಸಾರಾಂಶವನ್ನು ಪ್ರದರ್ಶಿಸಿದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ದ್ವಿತೀಯ ಬಹುಮಾನವನ್ನು ಹಂಚಿಕೊಂಡವು.
ಶ್ರೀಕೋಟೆ ಮಹಾಗಣಪತಿ ಮಂಟಪಕ್ಕಾಗಿ ಸುಮಾರು ರೂ.31.5 ಲಕ್ಷ ವೆಚ್ಚ ಮಾಡಲಾಗಿದ್ದು, 30 ಕಲಾಕೃತಿಗಳಿದ್ದವು.. ಅಧ್ಯಕ್ಷರಾಗಿ ಹೆಚ್.ಪಿ.ಲೋಕೇಶ್ ಕಾರ್ಯನಿರ್ವಹಿಸಿದರು.
ಶ್ರೀಕೋಟೆ ಮಾರಿಯಮ್ಮ ದೇವಾಲಯ ಮಂಟಪದ ಅಧ್ಯಕ್ಷರುಗಳಾಗಿ ಪ್ರಭು ರೈ ಹಾಗೂ ರಾಜಾ ಸುಬ್ಬಯ್ಯ ಕಾರ್ಯನಿರ್ವಹಿಸಿದರು. ಸುಮಾರು 25 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡ ಮಂಟಪದಲ್ಲಿ 17 ಕಲಾಕೃತಿಗಳಿದ್ದವು.
28ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡು ಉಗ್ರನರಸಿಂಹನಿಂದ ಹಿರಣ್ಯಕಶ್ಯಪು ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಿದ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯದ ಮಂಟಪ ತೃತೀಯ ಬಹುಮಾನ ಗಳಿಸಿತು. ಪಿ.ಜಿ. ಗಜೇಂದ್ರ (ಕುಶ) ಅವರ ಅಧ್ಯಕ್ಷತೆಯಲ್ಲಿ ನಿರ್ಮಿಸಲಾದ ಮಂಟಪಕ್ಕೆ ಸುಮಾರು 22 ಲಕ್ಷ ರೂ. ಖರ್ಚು ಮಾಡಲಾಗಿದ್ದು, 22 ಕಲಾಕೃತಿಗಳಿದ್ದವು.
ಉಳಿದ ಮಂಟಪಗಳು ಕೂಡ ಬಹುಮಾನಕ್ಕಾಗಿ ತೀವ್ರ ಪೈಪೋಟಿ ನೀಡಿ ಸಾವಿರಾರು ಜನರ ಮನಗೆದ್ದವು.
ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ದಶಮಂಟಪಗಳ ಸಾರಥಿ ಎಂದೇ ಖ್ಯಾತಿ ಪಡೆದಿರುವ 150 ವರ್ಷಗಳ ಇತಿಹಾಸ ಹೊಂದಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಮಂಟಪದಲ್ಲಿ ವೈಕುಂಠ ದರ್ಶನ ಕಥಾ ಸಾರಾಂಶವನ್ನು ಪ್ರದರ್ಶಿಸಿತು.
ನಗರದ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 105ನೇ ವರ್ಷದ ದಸರಾ ಉತ್ಸವದಲ್ಲಿ ವಿಷ್ಣುವಿನಿಂದ ಮಧು ಖೈಟಭರ ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಿ ಗಮನ ಸೆಳೆಯಿತು.
ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ 61ನೇ ವರ್ಷದ ದಸರಾ ಉತ್ಸವದಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಕಥಾ ಸಾರಾಂಶವನ್ನು ಪ್ರದರ್ಶಿಸಿತು.
ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕಂಚಿಕಾಮಾಕ್ಷಿ ಮುತ್ತು ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 60ನೇ ವರ್ಷದ ಉತ್ಸವದಲ್ಲಿ ಶಿವನಿಂದ ತ್ರಿಪುರಾಸುರರ ವಧೆ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿತು.
ನಾಲ್ಕು ಶಕ್ತಿ ದೇವತೆಗಳ ಹಿರಿಯ ಅಕ್ಕಳೆಂದೆ ಖ್ಯಾತಿ ಪಡೆದಿರುವ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಶ್ರೀ ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ 6 ರಿಂದ 10ರವರೆಗಿನ ಕದಂಬ ಕೌಶಿಕೆ ಕಥಾ ಸಾರಾಂಶವನ್ನು ಪ್ರದರ್ಶಿಸಿತು.
ಶಕ್ತಿ ದೇವತೆಗಳಲ್ಲೊಂದಾದ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಿಯಮ್ಮ ದೇವಾಲಯವರಾ ಮಂಟಪ ಸಮಿತಿ 93ನೇ ದಸರಾ ಉತ್ಸವದಲ್ಲಿ ಪರಶಿವನಿಂದ ಜಲಂಧರ ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಿ ಜನಮೆಚ್ಚುಗೆಗೆ ಪಾತ್ರವಾಯಿತು.
ಬಹುಮಾನ ವಿಜೇತ ಸಮಿತಿಗಳ ಪ್ರಮುಖರು ಗಣ್ಯರಿಂದ ಬಹುಮಾನ ಪಡೆದು ವಿಜೃಂಭಿಸಿದರು.
::: ಕರಗೋತ್ಸವಕ್ಕೆ ತೆರೆ :::
ಮಡಿಕೇರಿ ದಸರಾ ಜನೋತ್ಸವದಲ್ಲಿ ಪ್ರಮುಖ ಧಾರ್ಮಿಕ ಪಾತ್ರ ವಹಿಸುವ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವಕ್ಕೆ ಶ್ರದ್ಧಾಭಕ್ತಿಯ ತೆರೆ ಬಿತ್ತು. ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀಕಂಚಿಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ಕರಗಗಳು ದಶಮಂಟಪಗಳಿಗೆ ಪೂಜೆ ಸಲ್ಲಿಸಿ ಮತ್ತು ಪೂಜೆ ಪಡೆದು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಕರಗೋತ್ಸವವನ್ನು ಸಂಪನ್ನಗೊಳಿಸಿದವು.
::: ಕಿಕ್ಕಿರಿದ ಜನಸಂದಣಿ :::
ಪ್ರತಿವರ್ಷದಂತೆ ಈ ಬಾರಿ ಕೂಡ ವರ್ಣರಂಜಿತ ಮಡಿಕೇರಿ ದಸರಾ ಜನೋತ್ಸವಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸಾವಿರಾರು ಜನರು ಸಾಕ್ಷಿಯಾದರು. ಕೆಲವು ಭಾಗಗಳಲ್ಲಿ ನೂಕುನುಗ್ಗಲು ಉಂಟಾಗಿ ಪೊಲೀಸರು ಮಧ್ಯ ಪ್ರವೇಶ ಮಾಡುವ ಅನಿವಾರ್ಯತೆಯೂ ಎದುರಾಯಿತು.
::: ಮಿತಿ ಮೀರದ ಡಿಜೆ ಅಬ್ಬರ :::
ಆಕರ್ಷಕ ದಸರಾ ಮಂಟಪಗಳಲ್ಲಿ ಬೃಹತ್ ಡಿಜೆ ವ್ಯವಸ್ಥೆಗಳನ್ನು ಅಳವಡಿಸಲಾಗಿತ್ತಾದರೂ ಅಬ್ಬರ ಮಿತಿ ಮೀರಲಿಲ್ಲ. ಇದು ಯುವ ಸಮೂಹಕ್ಕೆ ಕೊಂಚ ನಿರಾಶೆಯನ್ನು ಉಂಟು ಮಾಡಿತ್ತಲ್ಲದೆ, ಕಥಾ ಸಾರಾಂಶ ಪ್ರಸ್ತುತ ಪಡಿಸುವ ಸಂದರ್ಭ ನೆರೆದಿದ್ದ ಸಾವಿರಾರು ಜನರಿಗೆ ಪರಿಣಾಮಕಾರಿಯಾಗಿ ಧ್ವನಿ ತಲುಪಲಿಲ್ಲ. ಸಾಮಾಜಿಕ ಕಾರ್ಯಕರ್ತ ಹಾಗೂ ಹೈಕೋರ್ಟ್ ವಕೀಲ ಅಮೃತೇಶ್ ಅವರು ಅಬ್ಬರದ ಡಿಜೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಕಾರಣದಿಂದ ನಿಯಮ ಉಲ್ಲಂಘಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆಯನ್ನು ದಶಮಂಟಪಗಳಿಗೆ ನೀಡಿತ್ತು.
::: ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ :::
ವಿಜಯದಶಮಿಯ ದಿನವಾದ ಮಂಗಳವಾರ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಸಾವಿರಾರು ಪ್ರೇಕ್ಷರರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಮುದ್ರ ಸ್ಕೂಲ್ ಆಫ್ ಡಾನ್ಸ್ ತಂಡದಿಂದ ನೃತ್ಯ ವೈವಿಧ್ಯ, ಉಡುಪಿಯ ಭಾಗಘವಿ ಡಾನ್ಸ್ ಟೀಮ್ ನಿಂದ ಗ್ರಾವಿಟಿ ಡಾನ್ಸ್, ಚಕ್ಕೇರ ಪಂಚಮ್ ತ್ಯಾಗರಾಜ್ ಮತ್ತು ತಂಡದಿಂದ ಗಾನಸುಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಗಮನ ಸೆಳೆದವು.
ರಾಜ್ಯದ ಹೆಸರಾಂತ ಗಾಯಕ, ಗಾಯಕಿಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವೂ ನಡೆಯಿತು.













