ಕುಶಾಲನಗರ ಅ.26 : ಮಹಾತ್ಮ ಗಾಂಧಿ ಪದವಿ ಕಾಲೇಜಿನ ವಾರ್ಷಿಕ ಕ್ರೀಡೋತ್ಸವಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆದ ಅಂತರ್ರಾಷ್ಟ್ರೀಯ ಕರಾಟೆ ಪಟು ಚೆಪ್ಪುಡಿರ ಎಸ್.ಅರುಣ್ ಮಾಚಯ್ಯ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟುವುದು ಮುಖ್ಯವಲ್ಲ. ಗುಣ ಮಟ್ಟದ ಶಿಕ್ಷಣ ನೀಡುವುದು ಅತೀ ಮುಖ್ಯ. ಗುಣಮಟ್ಟದ ಶಿಕ್ಷಣ ಇಂದು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಪದ್ಧತಿಗೆ ಹೆಚ್ಚು ಒಲವು ತೋರುವ ಮೂಲಕ ಪದವಿ ನಂತರ ಮುಂದೇನು ಎಂಬ ಪ್ರಶ್ನೆ ಬಂದಾಗ ಸೇನೆ, ಕ್ರೀಡೆ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಮುನ್ನುಗ್ಗಲು ಕರೆ ಕೊಟ್ಟರು.
ಕ್ರೀಡೆ ಎಂಬುದು ಆತ್ಮಸ್ಥೈರ್ಯ ಹಾಗೂ ಶಿಸ್ತು ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದ ಅವರು, ಯುವ ಶಕ್ತಿ ಹಾಗೂ ಯುವ ಸಂಪನ್ಮೂಲ ವನ್ನು ಹೊಂದಿರುವ ಭಾರತ ಜಗತ್ತಿನಲ್ಲೇ ಮೊದಲಿನದು ಎಂದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ನಾಗೇಶ್ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳ ಸಮಗ್ರ ಅಭ್ಯುದಯಕ್ಕೆ ಮುನ್ನುಡಿಯಾಗಿದ್ದು, ಕ್ರೀಡೆಯಲ್ಲಿ ಸಾಧನೆ ತೋರುವ ಕ್ರೀಡಾ ಪಟುಗಳಿಗೆ ಹಲವು ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಅವಕಾಶಗಳು ಲಭ್ಯವಾಗಲಿವೆ ಎಂದ ಅವರು, ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಪರಸ್ಪರ ಪ್ರೀತಿ, ಸಹಬಾಳ್ವೆಗಳ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕರೆ ಕೊಟ್ಟರು.
ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲೆ ಟಿ.ಎ. ಲಿಖಿತ, ಕಾಲೇಜಿನ ಕೋಶಾಧಿಕಾರಿ ಎನ್.ಎನ್ ನಂಜಪ್ಪ, ಕಛೇರಿ ಅಧೀಕ್ಷಕ ಮಹೇಶ್ ಅಮೀನ್ ಇದ್ದರು.
ಇದೇ ಸಂದರ್ಭ ಕರಾಟೆಯಲ್ಲಿ ವಿಶ್ವ ಮಟ್ಟದಲ್ಲಿ ಸಾಧನೆ ತೋರಿದ ಅತುಣ್ ಮಾಚಯ್ಯ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.
ಕ್ರೀಡೆಯಲ್ಲಿ ಸಾಧನೆ ತೋರಿದ ಸೆಸ್ಟೋಬಾಲ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಸಾಧನೆ ತೋರಿದ ಇರ್ಷಾದ್, ಕರಾಟೆಯಲ್ಲಿ ಚಿನ್ನದ ಪದಕ ಗಳಿಸಿದ ಅಜಿತ್, ಅಗ್ನಿಪಥ್ ಗೆ ಆಯ್ಜೆಯಾಗಿರುವ ಗಗನ್ ಚಿಣ್ಣಪ್ಪ ಅವರನ್ನು ಗೌರವಿಸಲಾಯಿತು.
ಪ್ರಾಂಶುಪಾಲೆ ಲಿಖಿತಾ ಸ್ವಾಗತಿಸಿದರು. ಉಪನ್ಯಾಸಕಿ ಬಿಂದು ನಿರೂಪಿಸಿ ಭವ್ಯ ವಂದಿಸಿದರು.










