ಮೂರ್ನಾಡು ಅ.27 : ಮೂರ್ನಾಡುವಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.
ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಭವ್ಯ ಬಯಲು ಅಲಂಕೃತ ವೇದಿಕೆಯಲ್ಲಿ 30ನೇ ವರ್ಷದ ಆಯುಧ ಪೂಜೆ ನೆರವೇರಿತು.
ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯನ್ನು ನೆರವೇರಿಸಿ, ನಂತರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ತೆರಳಲಾಯಿತು. ಈ ಸಂದರ್ಭ ವಿಶೇಷವಾಗಿ ಅಲಂಕೃತಗೊಂಡ ವಾಹನಗಳಲ್ಲಿ ಚಂದ್ರಯಾನ-3, ಮದ್ಯಪಾನದಿಂದ ಆಗುವ ಅಪಘಾತಗಳ ಸ್ತಬ್ದ ಚಿತ್ರಣ, ಐತಿಹಾಸಿಕ ಹಿನ್ನಲೆಯುಳ್ಳ ಶ್ರೀರಾಮನಿಂದ ರಾವಣದ ಸಂಹಾರ, ದುರ್ಗೆಯಿಂದ ದುರ್ಗಾಸುರನ ವಧೆ, ಶುಂಭನ ವಧೆ, ಶಿವಾಂಶನಿಂದ ಕಾಲಾಂಶನ ವಧೆಯ ಚಿತ್ರಣಗಳು, ಭಾರತದ ಚಂದ್ರಯಾನ-3 ಯಶಸ್ವಿ ಉಡಾವಣೆ ಹಾಗೂ ಸುರಕ್ಷಿತ ಲ್ಯಾಂಡಿಂಗ್, ರೈತ ದೇಶದ ಬೆನ್ನುಲೆಬು, ಸರ್ಕಾರಿ ಶಾಲೆಗಳನ್ನು ಉಳಿಸಿ ಹೀಗೆ ಇನ್ನು ಹಲವಾರು ಸ್ತಬ್ದ ಚಿತ್ರಗಳು ಮತ್ತು ವಿಟ್ಲದ ಕಲಾ ರಸಿಕ ಆಟ್ರ್ಸ್ ಬೊಂಬೆ ಬಳಗದ ಗೊಂಬೆ ಕುಣಿತ ಮತ್ತು ವಾದ್ಯಗೋಷ್ಠಿಗಳು ವೀಕ್ಷಕರ ಗಮನ ಸೆಳೆದವು.
ಸಮಾರಂಭದಕ್ಕೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ ವಿ.ಕೆ. ಲಲಿತ ಮಾತನಾಡಿ ಸಂಘಟನೆ ಬರಿ ಮಾತಲ್ಲ, ಕಾರ್ಯಗತಗೊಂಡಾಗ ಮಾತ್ರ ಸಂಘಗಳು ಗಟ್ಟಿಗೊಳ್ಳುತ್ತದೆ. ಸರ್ಕಾರಿ ಶಾಲೆ ಮತ್ತು ಪಾಂಡಾಣೆ ಮೈದಾನಕ್ಕೆ ಸಂಬಂಧಪಟ್ಟವರು ಹಾಗೂ ಸಂಘದ ಆಡಳಿತ ಮಂಡಳಿಯವರು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿದರೆ ಶಾಶ್ವತ ವೇದಿಕೆ ಕಾರ್ಯಗತಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮೂರ್ನಾಡಿನ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ದಂಬೆಕೊಡಿ ಕೆ. ಸುಬ್ರಮಣಿ ಮುಖ್ಯ ಅತಿಥಿಗಳ ಸ್ಥಾನದಿಂದ ಮಾತನಾಡಿ, ದುಷ್ಟರ ಸಂಹಾರವಾಗಿ ಶಿಷ್ಟರ ರಕ್ಷಣೆಯಾಗುವ ಈ ದಿನ ದುರ್ಗಾದೇವಿಯನ್ನು ಪೂಜಿಸುವ ಪುರಾಣ ಹಿನ್ನಲೆಯಿಂದ, ಆಯುಧಗಳಿಗೆ ಪೂಜೆಯನ್ನು ಮಾಡುವುದರೊಂದಿಗೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಮನತಣಿಸುವ ಕಾರ್ಯಗಳು ಸಂಘಗಳಿಂದ ಪ್ರಸ್ತುತದಲ್ಲಿ ಆಗುತ್ತಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕರವಂಡ ಕೆ. ಸಜನ್ ಗಣಪತಿ ವಹಿಸಿದ್ದರು.
ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಬಿ.ಎಸ್. ಕುಶನ್ ರೈ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರೇಖಾ ಬಾಲು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‍ನ ವಿಜೇತ ರಾಹುಲ್ ರಾವ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್, ಹಿಂದೂ ರುದ್ರಭೂಮಿಯ ಅಧ್ಯಕ್ಷ ಬಿ.ಎಸ್. ಅರುಣ್ ರೈ (ಬಾಬಾ), ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ಎನ್.ಕೆ. ಕಂಞರಾಮ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಎನ್. ಅನೂಪ್ ಉತ್ತಯ್ಯ, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ. ಹರೀಶ್, ಮೂರ್ನಾಡು ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಮುಂಡಂಡ ಪವಿ ಸೋಮಣ್ಣ, ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಕಂಬೀರಂಡ ಕೆ. ಸತೀಶ್ ಮುತ್ತಪ್ಪ, ಬಂಟರ ಸಂಘದ ಅಧ್ಯಕ್ಷ ಚಂದಶೇಖರ್ ರೈ, ತೊತ್ತಿಯಂಡ ಬೆಳ್ಳಿಯ್ಯಪ್ಪ, ಸಂಘದ ಉಪಾಧ್ಯಕ್ಷ ಅಶ್ವಥ್ ರೈ, ಕಾರ್ಯದರ್ಶಿ ಎನ್.ಎನ್. ಶರಣು, ಖಜಾಂಚಿ ಹೆಚ್.ಹೆಚ್. ಜಯಂತ್ ಕುಮಾರ್, ಸಹ ಕಾರ್ಯದರ್ಶಿ ದಿನೇಶ್ ರೈ ಹಾಜರಿದ್ದರು.
ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಸುಬೇದಾರ್ ಮೇಜರ್ ಬೈರಿಕುಂದಿರ ಉತ್ತಪ್ಪ, ನಿವೃತ್ತ ದೈಹಿಕ ಶಿಕ್ಷಕ ಅವರೆಮಾದಂಡ ಜಿ. ಗಣೇಶ್, ಬಲಮುರಿಯ ನಿವೃತ್ತ ಕರ್ನಲ್ ತೊತ್ತಿಯಂಡ ಬಿ. ಸಬಿತ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅಲಂಕೃತಗೊಂಡ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು. ತೃಶ ಕಾವೇರಪ್ಪ ಪ್ರಾರ್ಥಿಸಿ, ಎನ್.ಎನ್. ಶರಣು ಪ್ರಾಸ್ತಾವಿಕ ನುಡಿಯಾಡಿ, ಅಶ್ವಥ್ ರೈ ಸ್ವಾಗತಿಸಿ, ಸೀಮಾ ಸಜನ್ ಮತ್ತು ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಂಘದ ವತಿಯಿಂದ ನೆರೆದಿದ್ದ ಎಲ್ಲಾ ಸಾರ್ವಜನಿಕರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ರಾಹುಲ್ ರಾವ್ ಮತ್ತು ತಂಡದ ನೃತ್ಯ, ಭಾರತೀಯ ನೃತ್ಯ ಕಲಾ ಶಾಲೆಯ ಕಲಾವಿದರ ನೃತ್ಯಗಳು ಮತ್ತು ಸ್ಥಳೀಯ ಮಕ್ಕಳ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನಸೂರೆಗೊಂಡವು.