ಮಡಿಕೇರಿ ಅ.27 : ನಗರದ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ನ.4 ರಂದು ದಸರಾ ಮಂಟಪದ ಕಲಾಕೃತಿಗಳಿಗೆ ಶಾಂತಿ ಪೂಜೆ ನಡೆಯಲಿದೆ ಎಂದು ಕೋಟೆ ಮಹಾಗಣಪತಿ ಮಂಟಪ ಸಮಿತಿಯ ಅಧ್ಯಕ್ಷ ಹೆಚ್.ಪಿ.ಲೋಕೇಶ್ ತಿಳಿಸಿದ್ದಾರೆ.
ಶಾಂತಿಪೂಜೆಯ ದಿನ ದಸರಾ ಪ್ರಯುಕ್ತ ಆಯೋಜಿಸಿದ್ದ ಲಕ್ಕಿಡಿಪ್ ನ ಡ್ರಾ ಕೂಡ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
::: ಬೇಸರ :::
ಐತಿಹಾಸಿಕ ಮಡಿಕೇರಿ ದಸರಾ ದಶಮಂಟಪ ಶೋಭಾಯಾತ್ರೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಯಶಸ್ಸಿಗೆ ಕಾರಣಕರ್ತರಾದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಆದರೆ ಶೋಭಾಯಾತ್ರೆ ಸಂದರ್ಭ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪವು ಅವಘಡಕ್ಕೀಡಾಗಿರುವುದು ಅತೀವ ಬೇಸರವನ್ನು ತಂದಿದೆ. ದೇವಿಯ ಅನುಗ್ರಹದಿಂದ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಲೋಕೇಶ್ ಹೇಳಿದ್ದಾರೆ.









