ಕುಶಾಲನಗರ, ಅ.27 : ಕನ್ನಡ ಸಾಹಿತ್ಯ ಪರಿಷತ್ತು(ಕ.ಸಾ.ಪ.) ಜಿಲ್ಲಾ ಸಮಿತಿ, ಕ.ಸಾ.ಪ. ಕುಶಾಲನಗರ ತಾಲೂಕು ಸಮಿತಿ ಹಾಗೂ ಕ.ಸಾ.ಪ.ಹೆಬ್ಬಾಲೆ ವಲಯ ಘಟಕದ ವತಿಯಿಂದ ನವೆಂಬರ್ ತಿಂಗಳಲ್ಲಿ
ಹೆಬ್ಬಾಲೆ ಗ್ರಾಮದಲ್ಲಿ ನಡೆಸಲುದ್ದೇಶಿರುವ ” ಕರ್ನಾಟಕ ಸುವರ್ಣ ಸಂಭ್ರಮ: 50″ ರ ಪೂರ್ವಭಾವಿ ಸಭೆಯು ಆ.28 ರಂದು ನಡೆಯಲಿದೆ ಎಂದು ಕುಶಾಲನಗರ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಹೆಬ್ಬಾಲೆ ಪ್ರೌಢಶಾಲೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ: 50 ರ ಆಚರಣೆ ಕುರಿತು ಸಮಾಲೋಚನೆ ನಡೆಸಲಾಗುವುದು. ಸುವರ್ಣ ಸಂಭ್ರಮ ಆಚರಣೆಗೆ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳ ರಚನೆ, ಸಾಂಸ್ಕೃತಿಕ ಮೆರವಣಿಗೆ, ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಜನಪದ ವಸ್ತು ಪ್ರದರ್ಶನ, ಗ್ರಾಮದ ಅಲಂಕಾರ, ವೇದಿಕೆ ನಿರ್ಮಾಣ ಮತ್ತಿತರ ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ: 50 ರ ಆಚರಣೆಯನ್ನು ಹೆಬ್ಬಾಲೆ ಮತ್ತು ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಸಹಕಾರಿ ಸಂಸ್ಥೆಗಳು, ದೇವಾಲಯ ಸಮಿತಿಗಳು, ಹಾಲಿನ ಡೇರಿಗಳು ಸೇರಿದಂತೆ ಎಲ್ಲಾ ಗ್ರಾಮಸ್ಥರು, ನಿವೃತ್ತ ಅಧಿಕಾರಿಗಳು/ ನೌಕರರು, ಸಂಘ – ಸಂಸ್ಥೆಗಳು, ಕನ್ನಡಪರ ಸಂಘಟನೆಗಳ ಪ್ರಮುಖರು, ಮಹಿಳಾ ಸಂಘಟನೆಗಳು, ರೈತ ಮುಖಂಡರು, ಯುವಕರು- ಯುವತಿಯರು, ಶಾಲಾ- ಕಾಲೇಜಿನ ಶಿಕ್ಷಕರು, ಸಾಹಿತ್ಯಾಭಿಮಾನಿಗಳು ಹಾಗೂ ಕಲಾಸಕ್ತರನ್ನು ಒಳಗೊಂಡಂತೆ ಜನರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಸಂಘಟಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಗೆ ಕನ್ನಡಾಭಿಮಾನಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.