ಮಡಿಕೇರಿ ಅ.27 : ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಮತ್ತು ಶಾಲೆಗೆ ದಾಖಲಾಗದ ಮಕ್ಕಳನ್ನು ಗುರುತಿಸುವ ಸಮೀಕ್ಷೆ ಜಿಲ್ಲೆಯಲ್ಲಿ ನ.4 ರವರೆಗೆ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯ ಪೊನ್ನಪ್ಪ ತಿಳಿಸಿದ್ದಾರೆ.
ಶಾಲೆಯಿಂದ ಹೊರಗಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಜನವಸತಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಶಾಲೆ ಬಿಟ್ಟವರನ್ನು ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಜನವಸತಿ ಪ್ರದೇಶದ ನಾಗರಿಕರು ಜನಪ್ರತಿನಿಧಿಗಳು ಅಂಗನವಾಡಿ ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳು ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಒದಗಿಸಿ ಸಮೀಕ್ಷಾ ತಂಡಕ್ಕೆ ಸಹಕರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸೌಮ್ಯ ಪೊನ್ನಪ್ಪ ಅವರು ಕೋರಿದ್ದಾರೆ.
ಆರ್‍ಟಿಇ ಜಾರಿ ಹಿನ್ನೆಲೆಯಲ್ಲಿ ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗದಂತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ತರುವುದು ಎಲ್ಲರ ಕರ್ತವ್ಯವಾಗಿದೆ. ಸಮೀಕ್ಷಾ ಕಾರ್ಯದಲ್ಲಿ 2023-24ನೇ ಸಾಲಿನಲ್ಲಿ 6 ರಿಂದ 14 ವರ್ಷ ಮೇಲ್ಪಟ್ಟು ಶಾಲೆಗೆ ದಾಖಲಾಗಿ ಶಾಲೆ ಬಿಟ್ಟ ಹಾಗೂ ಶಾಲೆಗೆ ದಾಖಲಾಗದ ಮಕ್ಕಳನ್ನು ಗುರುತಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಶಾಲಾ ಮಾಹಿತಿಯನ್ವಯ ಶಾಲೆ ಬಿಟ್ಟ ಮಕ್ಕಳ ಮನೆಗಳಿಗೆ ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳು, ಮದರಸಗಳು, ಆಸ್ಪತ್ರೆ, ಹೋಟೆಲ್, ಛತ್ರಗಳು, ಚಿತ್ರಮಂದಿರಗಳು, ಸಣ್ಣ ಕಾರ್ಖಾನೆಗಳು, ಇಟ್ಟಿಗೆ ತಯಾರಿಸುವ ಸ್ಥಳ, ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳು, ಎಸ್ಟೇಟ್ ಪಾಂ್ಲಟೇಷನ್, ರಸ್ತೆ ಕಾಮಗಾರಿ, ಗಣಿಪ್ರದೇಶ, ಕ್ವಾರಿಗಳು, ಗುಡ್ಡಗಾಡು, ಪ್ರದೇಶ ಬಂದಿಖಾನೆಗಳು ಕೊಳಗೇರಿ ಪ್ರದೇಶಗಳಲ್ಲಿ ಬುಡಕಟ್ಟು ಪ್ರದೇಶ, ಕಾಡು ಪ್ರದೇಶ, ಐತಿಹಾಸಿಕ ಸ್ಥಳಗಳು ಗ್ಯಾರೇಜ್‍ಗಳಿಗೆ ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ತಿಳಿಸಿದ್ದಾರೆ.









