ಮಡಿಕೇರಿ ಅ.28 : ಜೀವನದಲ್ಲಿ ಯಾವುದೇ ನಕಾರಾತ್ಮಕ ಹಿನ್ನಲೆಯಿದ್ದರೂ ಕೂಡ ಸಕಾರಾತ್ಮಕದೆಡೆಗೆ ತೆರಳಿ ಮಾನಸಿಕವಾಗಿ ಪರಿವರ್ತನೆ ಹೊಂದಿ ಬದುಕನ್ನು ವಿಕಾಸಗೊಳಿಸಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ನೈಜ ಉದಾಹರಣೆ ಎಂದು ಸೈಂಟ್ ಆನ್ಸ್ ಪದವಿ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಹೇಮ ಅಭಿಪ್ರಾಯಪಟ್ಟರು.
ವಾಲ್ಮೀಕಿ ಜಯಂತಿಯ ಪ್ರಯುಕ್ತ ವಿರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನ, ಕನ್ನಡ ಭಾಷಾ ವಿಭಾಗ ಹಾಗೂ ಇತರ ಭಾಷಾ ವಿಭಾಗದ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆ ಪ್ರಯುಕ್ತ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಕುರಿತು ಹಾಗೂ ಪ್ರಸ್ತುತ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಏಕೆ ಅಗತ್ಯ ಎಂಬುದನ್ನು ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಪ್ರತಿಮಾ ರೈ ಪ್ರಾಸ್ತಾವಿಕ ನುಡಿಯ ಮುಖಾಂತರ ಕಾರ್ಯಕ್ರಮದ ಸ್ವರೂಪದ ಉದ್ದೇಶ ಮನದಟ್ಟು ಮಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಅರ್ಜುನ್ ಮೌರ್ಯ ಮಾತನಾಡಿ, ವಾಲ್ಮೀಕಿ ಜೀವನ ಹಿನ್ನೆಲೆ ಹಾಗೂ ಭಾರತೀಯ ಸಾಹಿತ್ಯದಲ್ಲಿ ಅವರ ಕೊಡುಗೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಬೀನ ರೋಸಿ, ಕನ್ನಡ ವಿದ್ಯಾರ್ಥಿ ಬಳಗದ ಮುಖಂಡರುಗಳಾದ ವಿದ್ಯಾರ್ಥಿ ಸನತ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಸ್ನೇಹ ಕಾರ್ಯಕ್ರಮ ನಿರೂಪಿಸಿದರು. ತಾಂತ್ರಿಕ ವ್ಯವಸ್ಥೆಯನ್ನು ಸಹಪ್ರಾಧ್ಯಾಪಕಿ ರಕ್ಷಿತ ನಿರ್ವಹಿಸಿದರು. ವಿದ್ಯಾರ್ಥಿನಿ ಇಂದು ಸ್ವಾಗತಿಸಿದರು. ವಿದ್ಯಾರ್ಥಿ ಸನತ್ ವಂದಿಸಿದರು.