ಮಡಿಕೇರಿ NEWS DESK ಡಿ.25 : ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣದೊಂದಿಗೆ ಸೃಜನಾತ್ಮಕ ಬೆಳವಣಿಗೆ ಅಗತ್ಯವಾಗಿದೆ. ಇದಕ್ಕಾಗಿ ಕ್ರೀಡೆ ಮತ್ತು ವಿವಿಧ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದು ಬಹುಮುಖ್ಯವಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕರಾದ ಮಿಲನ ಭರತ್ ತಿಳಿಸಿದ್ದಾರೆ. ಶತಮಾನೋತ್ಸವ ಸಂಭ್ರಮದಲ್ಲಿರುವ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ಶತ ಸಂಭ್ರಮ’ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೃಜನಾತ್ಮಕವಾದ ಕ್ರೀಡೆ ಮತ್ತು ಸಾಂಸ್ಕೃತಿಕ ಕಲಾ ಪ್ರಕಾರಗಳು ಪ್ರತಿಯೊಬ್ಬರನ್ನು ಸಮಾಜಕ್ಕೆ ತೆರೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಈ ಹಿಂದೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಠ್ಯೇತರವೆಂದು ಕರೆಯಲಾಗುತ್ತಿತ್ತು. ಆದರೆ ಪ್ರಸ್ತುತ ಇವುಗಳು ಶಿಕ್ಷಣಕ್ಕೆ ಪೂರಕವಾದ ಮತ್ತು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ.
ಕ್ರೀಡೆ ಮತ್ತು ಸಾಂಸ್ಕೃತಿಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತು ನೀಡುವ ಶೇ.80 ರಷ್ಟು ಮಕ್ಕಳು ಉದ್ಯೋಗದ ಅರ್ಹತೆಯನ್ನು ಕಳೆದುಕೊಳ್ಳಬಹುದು. ಸೃಜನಾತ್ಮಕವಾದ ಕಲೆ ಸಮಾಜದತ್ತ ಮುಖ ಮಾಡಲು ಮತ್ತು ತೆರೆದುಕೊಳ್ಳಲು ಅವಕಾಶವನ್ನು ಒದಗಿಸಿಕೊಡುತ್ತದೆ ಎಂದರು. ಶಿಕ್ಷಕ ವರ್ಗಕ್ಕೆ ರೂಪಿಸಿರುವ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಲಿ. ಇಂತಹ ಕ್ರೀಡೆ ಮತ್ತು ಸಾಂಸ್ಕçತಿಕ ಚಟುವಟಿಕೆಗಳು ಎಲ್ಲರನ್ನೂ ಸೌಹಾರ್ದಯುತವಾಗಿ ಬೆಸೆಯುವ ಅಂತಃಶಕ್ತಿಯನ್ನು ಹೊಂದಿರುವುದಾಗಿ ಮಿಲನ ಭರತ್ ಹೇಳಿದರು. ಸೌಹಾರ್ದ ಸಹಕಾರಿ ಸಂಘಗಳ ಮೈಸೂರು ವಿಭಾಗದ ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ಅವರು ಮಾತನಾಡಿ, ಕೊಡಗಿನಲ್ಲಿ 1925ರಲ್ಲೆ ಸೌಹಾರ್ದ ಸಹಕಾರಿ ಸಹಕಾರ ಸಂಘವನ್ನು ಹುಟ್ಟು ಹಾಕಿ ಶಿಕ್ಷಕರ ಆರ್ಥಿಕ ಸ್ಥಿರತೆಗೆ ಒತ್ತು ನೀಡಿದ ಹಿರಿಯರನ್ನು ನಾವಿಂದು ಸ್ಮರಿಸುವುದು ಅತ್ಯವಶ್ಯ. ಪ್ರಸ್ತುತ ರಾಜ್ಯದಲ್ಲಿ ಸೌಹಾರ್ದ ಕಾಯ್ದೆಯಡಿ 6700 ಕ್ಕೂ ಹೆಚ್ಚಿನ ಸೌಹಾರ್ದ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರು ಸೇರಿದಂತೆ ಈ ವಿಭಾಗದಲ್ಲಿ ಒಟ್ಟು 612 ಸೌಹಾರ್ದ ಸಹಕಾರಿ ಸಂಘಗಳಿದ್ದು, ಮತ್ತಷ್ಟು ಹೆಚ್ಚಿನ ಸಂಘಗಳ ರಚನೆಯಾಗಬೇಕಿದೆ ಎಂದರು. ಸೌಹಾರ್ದ ಕಾಯ್ದೆ 2001ರಲ್ಲಿ ಜಾರಿಗೆ ಬಂದು ಇದೀಗ 25 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇದೇ ಡಿ.28 ರಂದು ಬೆಳಗಾಂನಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘವನ್ನು ಗುರುತಿಸುವ ಕಾರ್ಯ ನಡೆಯಲಿದೆಯೆಂದು ತಿಳಿಸಿದರು. ಕಲಬುರ್ಗಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಸೌಹಾರ್ದ ಸಂಘದ ನಿರ್ದೇಶಕರೂ ಆಗಿರುವ ಮಲ್ಲಯ್ಯ ಗುತ್ತೇದಾರ್ ಅವರು ಮಾತನಾಡಿ, ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ವಾರ್ಷಿಕ 40 ಕೋಟಿಯಷ್ಟು ವಹಿವಾಟನ್ನು ನಡೆಸುತ್ತಿದೆ. ಇದು ಮತ್ತಷ್ಟು ಎತ್ತರಕ್ಕೆ ಬೆಳೆೆಯುವಂತಾಗಲೆಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಹಾಗೂ ಜಿಲ್ಲಾ ಸೌಹಾರ್ದ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೆ.ಬಿ.ಕಾಳಪ್ಪ ಮಾತನಾಡಿ ಶುಭ ಹಾರೈಸಿದರು.
ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಎಸ್.ಚೇತನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನ, ಮಡಿಕೇರಿ ಸರ್ಕಾರಿ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎನ್.ಎಂ.ಜಗದೀಶ್, ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮುತ್ತಪ್ಪ, ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘÀದ ಅಧ್ಯಕ್ಷ ಪ್ರಸನ್ನ, ಜಿಲ್ಲಾ ಸೌಹಾರ್ದ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ನಟೇಶ, ಮಡಿಕೇರಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೋಹನ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ನೃತ್ಯ ತೀರ್ಪುಗಾರರಾಗಿ ಆಗಮಿಸಿದ್ದ ಮೇಘ ಸುಜಯ್, ಸಿ.ಬಿ.ಸೌಜನ್ಯ, ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರುಗಳಾದ ಪುದಿಯನೆರವನ ರೇವತಿ ರಮೇಶ್, ಹೆಚ್.ಎನ್.ಮಂಜುನಾಥ್, ಟಿ.ಕೆ.ಬಸವರಾಜ, ಪ್ರಮುಖರಾದ ಮಂಜುನಾಥ್, ವಿಲ್‌ಫ್ರೆಡ್ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು. ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಎಸ್.ಚೇತನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಯಡವನಾಡು ಶಾಲಾ ವಿದ್ಯಾರ್ಥಿನಿ ಲಿಖಿತಾ ಸ್ವಾಗತ ನೃತ್ಯ ಮಾಡಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸ್ಪರ್ಧೆಗಳು ಶಿಕ್ಷಕರ ಪಾಲ್ಗೊಳ್ಳುವಿಕೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು.










