ಮಡಿಕೇರಿ ಡಿ.26 : 1935 ನೇ ಇಸವಿ ಮಾರ್ಚ್ 15 ರಂದು ಪಾಂಡಂಡ ಕುಟ್ಟಪ್ಪ ಅವರು ವಿರಾಜಪೇಟೆಯಲ್ಲಿ ಜನಿಸಿದರು. ಕರಡ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಇವರ ಧರ್ಮಪತ್ನಿ ಅಮ್ಮಣಿಚಂಡ ಲೀಲಾ ಕುಟ್ಟಪ್ಪ. ಇವರ ಮಗಳು ಸುಮನ್ ಬಿದ್ದಾಟಂಡ ಪ್ರದೀಪ್ ಅವರನ್ನು, ಇನ್ನೊಬ್ಬಳು ಮಗಳು ಸುಚಿತ ಬಲ್ಲಚಂಡ ಸುಬ್ರಮಣಿ ಅವರನ್ನು ಹಾಗೂ ಅವರ ಮಗ ಬೋಪಣ್ಣ ನುಚ್ಚಿಮಣಿಯಂಡ ಜ್ಯೋತಿ ಅವರನ್ನು ಮದುವೆಯಾದರು. ಹಾಕಿಯಲ್ಲಿ ಬಹಳಷ್ಟು ಪ್ರೀತಿ ಹೊಂದಿದ್ದ ಇವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೌಕರಿಗೆ ಸೇರಿದರು. ಅತಿ ಉನ್ನತ ತೀರ್ಪುಗಾರರಾಗಿ ಹೊರಹೊಮ್ಮಿದರು ಹಾಗೂ ಉನ್ನತ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು. 1997ರಲ್ಲಿ ಕರಡದಲ್ಲಿ ಕೌಟಂಬಿಕ ಹಾಕಿ ಹಬ್ಬವನ್ನು ಆಯೋಜಿಸಬೇಕೆಂಬ ಚಿಂತನೆಯನ್ನು ತನ್ನ ಸಹೋದರ ಹಾಗೂ ಗ್ರಾಮಸ್ಥರೋಡನೆ ಚರ್ಚಿಸಿ, 60 ಕುಟುಂಬಗಳನ್ನು ಒಳಗೊಂಡ ಕೌಟುಂಬಿಕ ಹಾಕಿಯನ್ನು ಪ್ರಥಮವಾಗಿ ಪ್ರಾರಂಭಿಸಿದರು. *ಉದ್ದೇಶ* ಗ್ರಾಮದಲ್ಲಿ ಎಲ್ಲರೂ ಒಂದೆಡೆ ಸೇರುವಂತೆ, ಮಹಿಳೆಯರಿಗೆ ಸಮಾನವಾದ ಹಕ್ಕು, ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಕಾಪಾಡುವ, ವಧು-ವರರನ್ನು ನೋಡುವ, ಸಾಂಪ್ರದಾಯಿಕ ಕ್ರೀಡೆಯನ್ನು ಬೆಳೆಸುವ ನಿಟ್ಟಿನಲ್ಲಿ, ಗ್ರಾಮ ಗ್ರಾಮಗಳಲ್ಲಿ ಮಾಡುವುದರಿಂದ ಮೈದಾನ ರಚನೆಯಾಗುತ್ತದೆ ಹಾಗೂ ಶಾಲಾ ಮಕ್ಕಳು ಆಡಲಿ ಎಂಬ ಉದ್ದೇಶದಿಂದ ಪ್ರಾರಂಭವಾಯಿತು. *ನಿಯಮಗಳು* ಕೌಟುಂಬಿಕ ಹಾಕಿ ಹಬ್ಬದಲ್ಲಿ ತಮ್ಮದೇ ಆದ ತಾಂತ್ರಿಕ ಸಮಿತಿ, ತೀರ್ಪುಗಾರರು, ವೀಕ್ಷಕ ವಿವರಣೆಗಾರರು ಹಾಗೂ ಮೈದಾನದ ತಯಾರು ಮಾಡುವವರು ರಚನೆಯಾಗಬೇಕು. ಎಲ್ಲರೂ ಕೊಡವರೇ ಆಗಿರಬೇಕು. ಮಹಿಳೆಯರು ತನ್ನ ಗಂಡನ ಮನೆಗೆ,ಇಲ್ಲವೇ ತವರು ಮನೆಗೆ ಆಡಬಹುದು. ವಯಸ್ಸಿನ ಮಿತಿಯಲ್ಲ. *ಹಾಕಿಯ ದಿಗ್ಗಜರ ಆಗಮನ* ವರ್ಷಗಳಿಂದ ಹಾಕಿಯ ದಿಗ್ಗಜರಾಗ ಎಂ.ಪಿ.ಗಣೇಶ್, ಬಿ.ಪಿ.ಗೋವಿಂದ, ಎಂ.ಎಂ.ಸೋಮಯ್ಯ, ಅಶೋಕ್ ಕುಮಾರ್, ಲೆಸ್ಲಿ ವಾಲ್ಟರ್ ಕ್ಲಾಡಿಯಸ್, ಧನರಾಜ್ ಪಿಳ್ಳೆ, ಸಮೀರ್ ದಾದ, ರಘುನಾಥ್, ಎಸ್.ವಿ.ಸುನಿಲ್, ಅರ್ಜುನ ಹಾಲಪ್ಪ, ಜಾಫರ್ ಇಕ್ಬಾಲ್ ಇವರೆಲ್ಲರ ಆಗಮನವನ್ನು ಇಲ್ಲಿ ಸ್ಮರಿಸಬಹುದು. 2012ರಲ್ಲಿ ಲಂಡನ್ ಒಲಂಪಿಕ್ಸ್ ನ ಭಾರತ ತಂಡದ ಅಂದಿನ ತರಬೇತಿದಾರರಾದ ಮೈಕಲ್ ನಾಬ್ಸ್ ಹಾಗೂ ಭಾರತ ತಂಡ ಆಗಮಿಸಿ ಪ್ರದರ್ಶನ ಪಂದ್ಯಾವಳಿ ಆಡಿದರು. *V.V.I.P ಗಳ ಆಗಮನ* ಇದುವರೆಗೆ ಕರ್ನಾಟಕದ ಮಾಜಿ ರಾಜ್ಯಪಾಲರಾದ ರಮಾದೇವಿ, ಕೇಂದ್ರ ಸಚಿವರಾದ ಎಂ.ಎಸ್.ಗಿಲ್, ಕೇಂದ್ರ ರಕ್ಷಣಾ ಸಚಿವರಾದ ಮನೋಹರ್ ಪಣಿಕರ್, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಮಾಜಿ ಮಂತ್ರಿಗಳಾದ ಎಂ.ಸಿ.ನಾಣಯ್ಯ, M.L.C ಗಳಾದ ಸುಜಾ ಕುಶಲಪ್ಪ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಪ್ರಸ್ತುತ ವಿರಾಜಪೇಟೆಯ ಶಾಸಕರಾದ ಎ.ಎಸ್.ಪೊನ್ನಣ್ಣ ಇವರುಗಳು ಆಗಮಿಸಿದ್ದು ಸ್ಮರಿಸಬಹುದು. *ಸಿನಿ ತಾರೆಯರು* 2010 ರಲ್ಲಿ ರೆಬೆಲ್ ಸ್ಟಾರ್ ಸಿನಿಮಾ ನಟ ಅಂಬರೀಶ್ ಅವರು ಆಗಮಿಸಿ ಎಲ್ಲರ ಮನಸ್ಸು ಸೆಳೆದರು. *ಮನೋರಂಜನೆ ಕಾರ್ಯಕ್ರಮ* ಇಷ್ಟು ವರ್ಷ ನಡೆದ ಹಾಕಿ ಪಂದ್ಯಾವಳಿಯಲ್ಲಿ ಕೊಡಗಿನ ಸಾಂಪ್ರದಾಯಿಕ ನೃತ್ಯ, ಡಾಗ್ ಶೋ, ಫೈರ್ ಶೋ, ಗುರುಕಿರಣ್ ನೈಟ್ಸ್, ಸಿಡಿಮದ್ದುಗಳ ಪ್ರದರ್ಶನ, ವಧು-ವರರ ಅನ್ವೇಷಣೆ, ತಿಂಡಿ ತಿನಿಸುಗಳ ಮೇಳ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಕೊಡಗಿನ ಸಾಂಪ್ರದಾಯಿಕ ಬಾಳೋಪಾಟು ಕಲಿಕೆ ಎಲ್ಲವೂ ನಡೆಯುತ್ತಿತ್ತು. *ಅದ್ಭುತ ಬಹುಮಾನ* ಫೈನಲ್ ನಲ್ಲಿ ಗೆದ್ದವರಿಗೆ ವಧು ವರರು ಹಾಕುವ ಚಿನ್ನದ ಆಭರಣ, ಅತೀಹೆಚ್ಚು ಗೋಲು ಭಾರಿಸಿದವರಿಗೆ ಅಪ್ಪಾಚಿ ಬೈಕ್, ಲಾಟ್ರಿಯ ಮೂಲಕ ಕಾರುಗಳನ್ನು, ಒಡಿ ಕತ್ತಿ ಹಾಗು ಗೆಜ್ಜೆ ತಂಡನ್ನು ಬಹುಮಾನವಾಗಿ ನೀಡುತ್ತಿದ್ದರು. *ಮುನ್ಸೂಚನೆ* ಕೌಟುಂಬಿಕ ಹಾಕಿ ಹಬ್ಬದಲ್ಲಿ ಇದುವರೆಗೆ ಅಂತರಾಷ್ಟ್ರೀಯ ತೀರ್ಪುಗಾರರು, ವೀಕ್ಷಕ ವಿವರಣೆಗಾರರು, ಮೈದಾನ ತಯಾರು ಮಾಡುವಂತಹ ತಜ್ಞರು ಹಾಗೂ ಅಂತರಾಷ್ಟ್ರೀಯ ಆಟಗಾರರಾದ ಎಸ್.ಕೆ.ಉತ್ತಪ್ಪ, ಚೀಯಣ್ಣ, ಪೂಣಚ್ಚ, ಅಮರ್ ಅಯ್ಯಮ್ಮ, ಎ.ಬಿ.ಸುಬ್ಬಯ್ಯ, ಬಿ.ಸಿ.ಪೂಣಚ್ಚ, ಬಿ.ಕೆ.ಸುಬ್ರಮಣಿ, ಪೊನ್ನಮ್ಮ, ಲೀಲಾವತಿ, ನಿಲನ್, ಪ್ರಧಾನ್ ಸೋಮಣ್ಣ, ನಿಕಿನ್ ತಿಮ್ಮಯ್ಯ, ನಿತಿನ್ ತಿಮ್ಮಯ್ಯ, ಕುಟ್ಟಪ್ಪ, ಚಂದುರ ಪೂವಣ್ಣ, ಕೆ ಕೆ ಪೂಣಚ್ಚ, ಉತ್ತಯ್ಯ, ಜಗದೀಶ್ ಪೊನ್ನಪ್ಪ, ರೋಹಿಣಿ ಬೋಪಣ್ಣ ಹಾಗೂ ಹಲವಾರು ಅಂತಾರಾಷ್ಟ್ರೀಯ ಹಾಕಿ ಆಟಗಾರರು ಆಡಿದ್ದನ್ನು ಇಲ್ಲಿ ಸ್ಮರಿಸಬಹುದು. *ಪ್ರಶಸ್ತಿಗಳು* ಪಾಂಡಂಡ ಕುಟ್ಟಪ್ಪನವರಿಗೆ *ಪೀಪಲ್ ಆಫ್ ದಿ ಇಯರ್* ಪ್ರಶಸ್ತಿಯು ನವ ದೆಹಲಿಯ ಇಂದ್ರ ಪ್ರಸ್ತ ಸಭಾಂಗಣದಲ್ಲಿ ಜಾನ್ ವಾಲ್ಟರ್ ಹಾಗೂ ಶಭಾನ ಆಸ್ಮಿ(ಸಿನಿ ತಾರೆ) ಅವರುಗಳ ಸಮ್ಮುಖದಲ್ಲಿ ನೀಡಲಾಯಿತು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭ್ಯವಾಗಿದೆ. 2018ರಲ್ಲಿ ಕೋವಿಡ್ ಹಾಗೂ ಜಲಪ್ರಳಯದಿಂದ ಕೌಟುಂಬಿಕ ಹಾಕಿ ಸ್ಥಗಿತಗೊಂಡಿತ್ತು. 2022 ರಲ್ಲಿ ಕುಟ್ಟಪ್ಪ ಅವರ ಜ್ಞಾಪಕಾರ್ಥವಾಗಿ ರಿಂಕ್ ಹಾಕಿಯನ್ನು ನಡೆಸಲಾಯಿತು. 2023ರಲ್ಲಿ ಅಪ್ಪಚೊಟ್ಟೋಳಂಡ ಕುಟುಂಬದ ಪ್ರಾಯೋಜಕತ್ವದಲ್ಲಿ ಹಾಗೂ ಕುಟ್ಟಪ್ಪ ಅವರ ಮಗ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಕೌಟುಂಬಿಕ ಹಾಕಿ ಮರುಚಾಲನೆಗೊಂಡಿತ್ತು. *ಬೆಳ್ಳಿಯ ಸ್ಟಿಕ್ ನಿಂದಲೇ ಉದ್ಘಾಟನೆ* 2000 ಇಸವಿಯಲ್ಲಿ ಚೆಪ್ಪುಡೀರ ಕುಟುಂಬದವರು ಆಯೋಜಿಸಿದ ಪಂದ್ಯಾವಳಿಯಿಂದ, ಪ್ರತಿ ವರ್ಷವೂ ಬೆಳ್ಳಿಯ ಸ್ಟಿಕ್ ಹಾಗೂ ಚೆಂಡಿನಿಂದಲೇ ಪಂದ್ಯಾಟ ಉದ್ಘಾಟನೆಯಾಗಬೇಕೆಂಬ ನಿಯಮ ನಡೆದು ಬರುತ್ತಿದೆ. ಇದು ವಿಶ್ವದಲ್ಲಿ ಎಲ್ಲಿಯೂ ಇಲ್ಲ. *ಕೊಡವ ಹಾಕಿ ಅಕಾಡೆಮಿ* ಕುಟ್ಟಪ್ಪ ಅವರ ನಿಧನದ ನಂತರ ಅವರ ಮಗ ಬೋಪಣ್ಣ ಹಾಕಿ ಅಕಾಡೆಮಿಯನ್ನು ಕಾರ್ಯರೂಪಕ್ಕೆ ತಂದರು. 23ನೇ ಕೌಟುಂಬಿಕ ಹಾಕಿ ಹಬ್ಬದಲ್ಲಿ ಕುಟ್ಟಪ್ಪನವರನ್ನು ಸ್ಮರಿಸುವ ಉದ್ದೇಶದಿಂದ ಗೆದ್ದವರಿಗೆ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಿದರು. *ಲಿಮ್ಕಾ ಹಾಗು ಗಿನ್ನಿಸ್ ದಾಖಲೆ* ಕೌಟುಂಬಿಕ ಹಾಕಿ ಹಬ್ಬವು ನೆಲ್ಲಮಕ್ಕಡ, ಶಾಂತೆಯಂಡ ಹಾಗೂ ಕುಪ್ಪಂಡ ಕುಟುಂಬಸ್ಥರು ಆಯೋಜಿಸಿದ್ದ ಸಮಯದಲ್ಲಿ 3 ಬಾರಿ ಲಿಮ್ಕಾ ದಾಖಲೆ ನಿರ್ಮಿಸಿತು. 2024ರ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ *4834* ಆಟಗಾರರು ಆಡಿ, ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿ ಕ್ರೀಡಾಭಿಮಾನಿಗಳ ಮೆಚ್ಚುಗೆ ಗಳಿಸಿದರು ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡರು. *ಈಶ್ವರ ತಂಬುರಾನ್ ನ ಕೃಪೆ* 28 ವರ್ಷದ ಹಿಂದೆ ಕರಡದಲ್ಲಿ ಕೌಟುಂಬಿಕ ಹಾಕಿ ಪ್ರಾರಂಭವಾಯಿತು. ಈ ಕಳೆದುಹೋದ ನೆನಪುಗಳನ್ನು ಕರಡದ ಗ್ರಾಮಸ್ಥರು ಮೆಲುಕು ಹಾಕುತ್ತಾ. ತಂಬುರಾನ್ ಈಶ್ವರನ ಕೃಪೆಯಿಂದ ಹಬ್ಬವು ಇಷ್ಟು ಎತ್ತರಕ್ಕೆ ಬೆಳೆದಿದ್ದನ್ನು ನೆನೆದರು. *ಕುಟ್ಟಪ್ಪನವರ ಪುತ್ಥಳಿ* ಯನ್ನು ಕರಡದಲ್ಲಿ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. *ಮುದ್ದಂಡ ಹಾಕಿ ಹಬ್ಬದಲ್ಲಿ ಆಯ್ಕೆದಾರರ ಆಗಮನ* ಭಾರತ ತಂಡದ ಆಯ್ಕೆದಾರರಾದ ಮೊಹಮ್ಮದ್ ರಿಯಾಜ್, ಎಂ.ಎಂ.ಸೋಮಯ್ಯ, ಬಿ.ಪಿ.ಗೋವಿಂದ ಅವರು ಆಗಮಿಸಿದ್ದು ಮುದ್ದಂಡ ಕಪ್ ಗೆ ಮೆರುಗು ತಂದಿತ್ತು. ಇವರಲ್ಲದೆ ಅಶ್ವಿನಿ ಪೊನ್ನಪ್ಪ, ಅಶ್ವಿನಿ ನಾಚಪ್ಪ, ಪದ್ಮಶ್ರೀ ವಿ.ಭಾಸ್ಕರನ್, ಸರ್ದಾರ್ ಸಿಂಗ್, *ಅಂತರಾಷ್ಟ್ರೀಯ ಹಾಕಿ ಆಟಗಾರ್ತಿ ಪುಷ್ಪ ಪೂವಯ್ಯ* ಹಾಗೂ ಕರ್ನಾಟಕದ ಬಹುತೇಕ ಮಂತ್ರಿಗಳು ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮುದ್ದಂಡ ಕಪ್ ನಲ್ಲಿ ಹಾಕಿ ಪಂದ್ಯಾವಳಿಗಳನ್ನು YouTube ಮೂಲಕ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡಲಾಯಿತು. ಮಹಿಳೆಯರಿಗಾಗಿ 5-A ಸೈಡ್ ಹಾಕಿ ಪಂದ್ಯಾವಳಿಯನ್ನು ಕೂಡ ಆಯೋಜಿಸಲಾಗಿತ್ತು. ಈ ಕೌಟುಂಬಿಕ ಹಾಕಿ ಪಂದ್ಯಾವಳಿಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿತು. *ವಿಶ್ವದ ಭೂಪಟ* ಕೌಟುಂಬಿಕ ಹಾಕಿಯಿಂದಲೇ ವಿಶ್ವದ ಭೂಪಟದಲ್ಲಿ ಕೊಡಗನ್ನು ಗುರುತಿಸಲಾಯಿತು. ವಿಶ್ವದಲ್ಲೆಡೆ ಪ್ರಚಾರ ಕೂಡ ಆಯಿತು. ಇದುವರೆಗೆ ಅಂದಾಜು 1,00,000 ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಆಡಿದ್ದು. 1000ಕ್ಕೂ ಹೆಚ್ಚು ತಾಂತ್ರಿಕ ಸಮಿತಿಯವರು ಕಾರ್ಯನಿರ್ವಹಿಸಿದ್ದು. ಹಾಕಿಯನ್ನು ಹಾಗು ಕೊಡವರನ್ನು ಬಲಿಷ್ಠ ಗೊಳಿಸಿದೆ. ಇದು ಒಂದೇ ವೇದಿಕೆ ವರ್ಷಕ್ಕೊಮ್ಮೆ ಸೇರುವ ಸಂಭ್ರಮದ ದಿನವಾಗಿರುತ್ತದೆ. ಇದು ಎಂದಿಗೂ ಮರೆಯಲಾಗದ ಕಟುಸತ್ಯ. *ಕೌಟುಂಬಿಕ ಹಾಕಿಯ ಚಾಂಪಿಯನ್ಸ್ ಟ್ರೋಫಿ* ಪಾಂಡಂಡ ಕುಟ್ಟಪ್ಪ ಅವರ ದೂರದ ಕನಸು ಚಾಂಪಿಯನ್ಸ್ ಟ್ರೋಫಿ. ಕಳೆದ 25 ವರ್ಷಗಳಲ್ಲಿ ಫೈನಲ್ಸ್ ಪಂದ್ಯಾವಳಿಯಲ್ಲಿ ಆಡಿದ ವಿನ್ನರ್ಸ್ ಹಾಗೂ ರನ್ನರ್ಸ್ ಈ ಎರಡು ತಂಡಗಳ ನಡುವೆ ಪಂದ್ಯಾವಳಿ ನಡೆಸಬೇಕು ಎಂಬ ಕನಸು ಕಂಡಿದ್ದರು. ಅದರಂತೆ ಅವರ ಮಗ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ ಅವರು ಚಾಂಪಿಯನ್ಸ್ ಟ್ರೋಫಿಯನ್ನು ಈ ವರ್ಷ ಮೂರ್ನಾಡಿನಲ್ಲಿ ಆಯೋಜಿಸಿದ್ದಾರೆ. ಇದರಲ್ಲಿ 13 ಕುಟುಂಬಗಳು ಭಾಗವಹಿಸುತ್ತಿದೆ. ಇಲ್ಲಿಯವರೆಗೆ ಕೌಟುಂಬಿಕ ಹಾಕಿ ಹಬ್ಬದ ಪ್ರಯೋಜಕತ್ವವನ್ನು ವಹಿಸಿಕೊಂಡಿದ್ದ ಕುಟುಂಬಗಳ ಇಬ್ಬರು ಸದಸ್ಯರನ್ನು ಕರೆದು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೌರವ ನೀಡುತ್ತಿರುವುದು ಶ್ಲಾಘನೀಯ. ಇದು ಇಂದು ಕೌಟುಂಬಿಕ ಹಾಕಿಯ ಜನಕ ಕುಟ್ಟಪ್ಪ ಅವರು ಚಾಂಪಿಯನ್ಸ್ ಟ್ರೋಫಿ ನಡೆಯಬೇಕು ಎಂದು ಕಂಡಿದ್ದ ಕನಸು ನನಸಾಗಿದೆ. ಈ ಪಂದ್ಯಾವಳಿಯಲ್ಲಿ ಆಡುತ್ತಿರುವ ಎಲ್ಲಾ ತಂಡಗಳಿಗೂ ಶುಭವಾಗಲಿ. *”ಇದು ಕೌಟುಂಬಿಕ ಹಾಕಿ ನಡೆದು ಬಂದ ಹಾದಿ”* *ಕೊಡವಾಮೆ ಬಾಳೊ* ಚೆಪ್ಪುಡೀರ ಕಾರ್ಯಪ್ಪ, ವೀಕ್ಷಕ ವಿವರಣೆಗಾರ ಹಾಗೂ ಬರಹಗಾರ @9900369212










