
ಮಡಿಕೇರಿ NEWS DESK ಡಿ.25 : ಮಡಿಕೇರಿಯ ಕೊಡಗು ಗೌಡ ಸಮಾಜದ ಮೂರು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಂಬೆಕೋಡಿ ಆನಂದ, ಸೂರ್ತಲೆ ಸೋಮಣ್ಣ, ಹುದೇರಿ ರಾಜೇಂದ್ರ, ಕೊಲ್ಯದ ಗಿರೀಶ್, ಮಂದ್ರಿರ ತೇಜಸ್, ಪುಳಕಂಡ ಸಂದೀಪ್, ಕೊಂಬನ ಪ್ರವೀಣ್, ಪೊನ್ನಚ್ಚನ ಮಧು, ತೋಟಂಬೈಲು ಅನಂತ ಕುಮಾರ್, ಪೈಕೇರ ಮನೋಹರ ಮಾದಪ್ಪ, ಕಾಳೇರಮ್ಮನ ನಂದಕುಮಾರ್, ಆಮೆ ಸೀತಾರಾಮ್, ಪೇರಿಯನ ಘನ ಶ್ಯಾಮ್, ಮಹಿಳಾ ತಂಡದಿಂದ ಚೊಕ್ಕಾಡಿ ಪ್ರೇಮ ರಾಘವಯ್ಯ ಹಾಗೂ ಮೂಲೆಮಜಲು ಅಮಿತಾ ಆಯ್ಕೆಯಾದರು. ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಪಾಣತ್ತಲೆ ಪಳಂಗಪ್ಪ ಕಾರ್ಯನಿರ್ವಹಿಸಿದರೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಸಹಕಾರ ನೀಡಿತು. ನಿಕಟಪೂರ್ವ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ನಮ್ಮ ಜನಾಂಗದ ಹೆಮ್ಮೆಯ ಪ್ರತಿಷ್ಠಿತ ಮಡಿಕೇರಿಯ ಕೊಡಗು ಗೌಡ ಸಮಾಜದ ಮೂರು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಆಯ್ಕೆ ಮಾದರಿ ಎಂಬಂತೆ ನಡೆದಿದೆ ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಆಶಯದಂತೆ ಒಂದು ಸಶಕ್ತ ತಂಡ ಆಯ್ಕೆಯಾಗಿದೆ. ಇಂದಿನ ಚುನಾವಣೆ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲರೂ ಸೇರಿ ಅವಿರೋಧವಾಗಿ 15 ಮಂದಿಯನ್ನು ಆಯ್ಕೆ ಮಾಡಿ ಒಕ್ಕೂಟದ ಮನವಿಗೆ ಸ್ಪಂದಿಸಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೇ ಈ ದಿನ ಆಯ್ಕೆ ನಡೆದಿರುವುದು ನಮಗೆ ಇನ್ನಷ್ಟು ಸಂತಸ ತಂದಿದ್ದು, ಹೊಸ ಆಡಳಿತ ಮಂಡಳಿಗೆ ಅಭಿನಂದನೆ ಮತ್ತು ನಮ್ಮ ಮನವಿಗೆ ಮನ್ನಣೆ ನೀಡಿ ನಾಮಪತ್ರಗಳನ್ನು ವಾಪಸ್ಸು ಪಡೆದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಇದುವರೆಗೆ ಸಮಾಜವನ್ನು ಶಕ್ತಿಯುತವಾಗಿ ಮುನ್ನಡೆಸಿ ಇಂದಿನ ಆಯ್ಕೆಗೆ ಸಹಕರಿಸಿದ ನಿಕಟ ಪೂರ್ವ ಅಧ್ಯಕ್ಷ ಪೇರಿಯನ ಜಯಾನಂದ ಹಾಗೂ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪಾಣತ್ತಲೆ ಪಳಂಗಪ್ಪ ಅವರುಗಳು ಕಾರ್ಯ ಶ್ಲಾಘನೀಯವೆಂದರು. ಶಕ್ತಿಯುತ ಮತ್ತು ಸ್ವಾಸ್ಥ್ಯಭರಿತ ಸಮಾಜ ನಿರ್ಮಾಣ ಮಾಡುವತ್ತ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದು ಆನಂದ ಕರಂದ್ಲಾಜೆ ಕರೆ ನೀಡಿದರು. ಕೊಡಗು ಗೌಡ ಸಮಾಜ ಮಡಿಕೇರಿಯ ಆಡಳಿತ ಮಂಡಳಿಗೆ ಹಲವು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿರುವುದು ಜನಾಂಗದ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಎಲ್ಲಾ ಅಭ್ಯರ್ಥಿಗಳು ಕೊಡಗು ಗೌಡ ಸಮಾಜಗಳ ಒಕ್ಕೂಟದ ವಿನಂತಿಗೆ ಸ್ಪಂದಿಸಿ ನಿಷ್ಪಕ್ಷಪಾತದ ಆಡಳಿತ ಮಂಡಳಿ ಆಯ್ಕೆಯಾಗುವಂತೆ ಸಂಪೂರ್ಣ ಸಹಕಾರ ನೀಡಿದ್ದು, ಎಲ್ಲಾ ಅಭ್ಯರ್ಥಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಒಕ್ಕೂಟದ ಉಪಾಧ್ಯಕ್ಷ ಡಾ.ತೇನನ ರಾಜೇಶ್ ಹೇಳಿದರು. ಒಕ್ಕೂಟ ಅವಿರತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತದೆ ಎಂಬುವುದಕ್ಕೆ ಇದು ಉದಾಹರಣೆಯಾಗಿದೆ. ನಿಮ್ಮೆಲ್ಲರ ಆತ್ಮವಿಶ್ವಾಸ ಹಾಗೂ ನಂಬಿಕೆಗೆ ನಾವು ಚಿರಋಣಿಗಳಾಗಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಗೌಡ ಸಮಾಜಗಳಲ್ಲಿ ಜವಾಬ್ದಾರಿಯುತ ಮತ್ತು ಹುಮ್ಮಸಿನಿಂದ ಕಾರ್ಯನಿರ್ವಹಿಸುವ ಆಡಳಿತ ಮಂಡಳಿ ಆಯ್ಕೆಯಾಗಿ ಬರಲಿ ಎಂದು ಅವರು ಶುಭ ಹಾರೈಸಿದರು. ಆಡಳಿತ ಮಂಡಳಿಗೆ 15 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಲು ಒಕ್ಕೂಟ ನಡೆಸಿದ ಪ್ರಯತ್ನವನ್ನು ಕಾರ್ಯದರ್ಶಿ ಪೇರಿಯನ ಉದಯ ಕುಮಾರ್ ಸ್ಮರಿಸಿದರು.










