ಮಡಿಕೇರಿ ಅ.28 : ಶ್ರದ್ಧೆ-ಭಕ್ತಿ, ಶಿಸ್ತು ಹಾಗೂ ಸಂಯಮ ವಿದ್ಯಾರ್ಥಿಗಳಲ್ಲಿ ಹಾಸು ಹೊಕ್ಕಾಗಿರಬೇಕಾದ ಪ್ರಮುಖ ಗುಣಗಳಾಗಿದ್ದು, ಇವುಗಳನ್ನು ಮೈಗೂಡಿಸಿಕೊಂಡವರು ಸಮಾಜದಲ್ಲಿ ಆದರ್ಶ ಪ್ರಾಯರಾಗಿ ಹೊರ ಹೊಮ್ಮುತ್ತಾರೆ ಎಂದು ತಹಶೀಲ್ದಾರ್ ಜಯಕುಮಾರ್ ಹೇಳಿದರು.
ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕಾಲೇಜು ಕ್ರೀಡೋತ್ಸವದ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕ್ರೀಡೆ ಎಂಬುದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಬೇಕಾದ ಬೆಳಕಿದ್ದಂತೆ ಎಂದು ವಿಶ್ಲೇಷಿಸಿದರು.
ವಿದ್ಯಾರ್ಥಿಗಳು ಹೆತ್ತವರು, ಶಿಕ್ಷಕರು ಹಾಗೂ ನಮ್ಮನ್ನು ಹೊತ್ತು ನಿಂತಂತಹ ಭೂಮಿ ತಾಯಿಗೆ ಸದಾ ಋಣಿಯಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಜಯಕುಮಾರ್ ಕರೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪ್ರಾಂಶುಪಾಲೆ ಟಿ.ಎ.ಲಿಖಿತಾ, ಉಪನ್ಯಾಸಕರಾದ ಮಂಜೇಶ್, ಬಿಂದು, ಶರಣ್, ಕ್ರೀಡಾ ವಿಭಾಗದ ಉಪನ್ಯಾಸಕ ದಿನೇಶ್, ಕಛೇರಿ ಅಧೀಕ್ಷಕ ಮಹೇಶ್ ಹಾಜರಿದ್ದರು. ಉಪನ್ಯಾಸಕರಾದ ಅಶ್ವಿತಾ ಸ್ವಾಗತಿಸಿದರು. ಸುಜಾತ ನಿರೂಪಿಸಿದರು. ಮಮ್ತಾಜ್ ವಂದಿಸಿದರು.








