ಮಡಿಕೇರಿ ಅ.29 : ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ನಾಡುಗುಂಡಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಅಪಾರ ಪ್ರಮಾಣದ ಕೃಷಿ ಫಸಲು ನಾಶವಾಗಿದೆ.
ಸ್ಥಳೀಯ ನಿವಾಸಿಗಳಾದ ಮಧು ಮಂದಣ್ಣ, ಕಣ್ಣೀಯರ ಪೆಮ್ಮಯ್ಯ, ಕಾಳೇಗಡ ಬೋಪಣ್ಣ ಹಾಗೂ ಬಂಟರ ರವಿ ಎಂಬುವವರ ಭತ್ತದ ಗದ್ದೆ, ಕಾಫಿ, ಅಡಿಕೆ, ಬಾಳೆ ಸಹಿತ ಇತರ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿವೆ. ಅಂದಾಜು 2 ರಿಂದ 3 ಎಕರೆ ಬೆಳೆ ನಾಶವಾಗಿದ್ದು, ಸುಮಾರು 3 ರಿಂದ 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಸುಕಿನ ಜಾವ ಕಾಡಾನೆಗಳ ಹಿಂಡಿನಿಂದ ದಾಳಿಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.









