ಕುಶಾಲನಗರ, ಅ.30 : ವೀರಶೈವ , ಲಿಂಗಾಯತ ಅಂತಾ ಪ್ರತ್ಯೇಕ ಧರ್ಮ ಅಥವಾ ಒಂದು ಜಾತಿಯಿಲ್ಲ. ವೀರಶೈವ, ಲಿಂಗಾಯತ ಎರಡೂ ಒಂದೇ ಅಂತಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹದೇವ ಬಿದಿರಿ ಹೇಳಿದರು.
ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆದ ಹಾನಗಲ್ ಶ್ರೀ ಕುಮಾರಸ್ವಾಮಿಗಳ 156 ನೇ ಜಯಂತಿ, ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಸ್ಮರಣೋತ್ಸವ ಹಾಗೂ ವೀರಶೈವ ಧಾರ್ಮಿಕ ಜನಜಾಗೃತಿ ಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕಿದೆ. ಎಲ್ಲರ ಒಗ್ಗಟ್ಟಿನಿಂದ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಅವರು ಸಲಹೆ ನೀಡಿದರು.
ಪ್ರತಿಯೊಬ್ಬರೂ ಸಮಾಜದ ಸುಧಾರಣೆಗೆ ಕಂಕಣಬದ್ಧರಾಗಿ ದುಡಿಯುವ ಮೂಲಕ ದುರ್ಲರ
ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದು ಶಂಕರ ಬಿದರಿ ಹೇಳಿದರು.
ಲೇಖಕ ಸುಳ್ಯದ ಡಾ ಬಿ.ಪ್ರಭಾಕರ ಶಿಶಿಲ ರಚಿತ ಐತಿಹಾಸಿಕ ಕಾದಂಬರಿ ಕೊಡಗಿನ ಲಿಂಗರಾಜ ಎಂಬ ಕೃತಿ ಹಾಗೂ ಸೋಮವಾರಪೇಟೆಯ ನಿವೃತ್ತ ಮುಖ್ಯ ಶಿಕ್ಷಕಿ ಜಲಜಾ ಶೇಖರ್ ಅವರ ‘ ನೆಲ ಮುಗಿಲು ‘ ಕವನ ಸಂಕಲನ ಪುಸ್ತಕಗಳನ್ನು ಬಿಡುಗಡೆ ಮಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂ.ಆಲೂರು ಮಾತನಾಡಿ, ವೀರಶೈವ ಸಮಾಜವು ಕಾಯಕ ಹಾಗೂ ದಾಸೋಹ ಕಾರ್ಯಕ್ಕೆ ಮಾದರಿಯಾಗಿದೆ.
ಬಸವಾದಿ ಶರಣರು ಸಮಾಜಕ್ಕೆ ನೀಡಿರುವ ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿದ್ದು, ನಾವುಗಳು ಅವುಗಳನ್ನು ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದರು.
ಸಮಾಜದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಮೂಲಕ ಅವರನ್ನು ಸಮಾಜದಲ್ಲಿ ಸುಸಂಸ್ಕೃತರಾಗಿ ರೂಪಿಸುವುದು ಜವಾಬ್ದಾರಿಯಾಗಿದೆ ಎಂದರು.
ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಎಲ್ಲರೂ ಜತೆಗೂಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ತಾವು ವೈಯಕ್ತಿಕವಾಗಿ ಹಾಗೂ ಸರ್ಕಾರದ ವತಿಯಿಂದ ವೀರಶೈವ ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.
ಲೇಖಕ ಸುಳ್ಯದ ಡಾ ಬಿ.ಪ್ರಭಾಕರ ಶಿಶಿಲ , ರಾಜರ ಕಾಲದಲ್ಲಿ ಕೊಡಗು ರಾಜ್ಯದ ಆಳ್ವಿಕೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಅರಮೇರಿ ಕಳಂಚೇರಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸತ್ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಹೈಕೋರ್ಟ್ ವಕೀಲ ಎಚ್.ಎಸ್. ಚಂದ್ರಮೌಳಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು.
ಕಲ್ಮಠದ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಮಹಾಸಭಾದ ರಾಜ್ಯ ಘಟಕದ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್
ಇದ್ದರು.
ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.
ಅಂತರರಾಷ್ಟ್ರೀಯ ರಸಾಯನಶಾಸ್ತ್ರ ವಿಜ್ಞಾನಿಯಾದ ಮಡಿಕೇರಿ ಎಫ್.ಎಂ.ಸಿ.ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಜೆ.ಜಿ.ಮಂಜುನಾಥ್, ಮಹಾಸಭಾದ ರಾಜ್ಯ ಸಮಿತಿ ಯ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ಯುವ ಘಟಕದ ನಿರ್ದೇಶಕ ವಿರೂಪಾಕ್ಷ, ಜಿಲ್ಲಾ ಮಹಾಸಭಾದ ಮಾಜಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಉಪಾಧ್ಯಕ್ಷ ಜಿ.ಎಂ.ಕಾಂತರಾಜು, ಎಸ್.ಎಸ್.ಸುರೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ, ಖಜಾಂಚಿ ಎಚ್.ಪಿ.ಉದಯಕುಮಾರ್, ಕಾರ್ಯದರ್ಶಿ ಜೆ.ಸಿ.ಶೇಖರ್, ಮಹಾಸಭಾದ ತಾಲ್ಲೂಕು ಅಧ್ಯಕ್ಷ ಕೆ.ಬಿ.ಹಾಲಪ್ಪ, ಕೆ.ಎಸ್.ಸಂದೀಪ್, ರುದ್ರಪ್ರಸನ್ನ, ವಿವಿಧ ಘಟಕಗಳ ಪ್ರಮುಖರಾದ ಎಚ್.ಎಂ.ಮಧುಸೂದನ್, ಎಸ್.ನಂದೀಶ್, ಮೋಕ್ಷಿತ್ ರಾಜ್, ಆದರ್ಶ್, ಪ್ರದೀಪ್, ಕಟ್ಟಡದ ದಾನಿಗಳಾದ ಸುಶೀಲಮ್ಮ ಮತ್ತು ಎಂ.ಬಿ.ಬಸವರಾಜ್, ಮಹಾಸಭಾದ ನಿರ್ದೇಶಕ ಎಂ.ಮಹದೇವಪ್ಪ, ವೀರಶೈವ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು, ಇತರರು ಇದ್ದರು.
ಶಿಕ್ಷಕಿಯರಾದ ಬಿ.ಬಿ.ಹೇಮಲತಾ, ಡಿ.ಎಂ.ಮಹಾದೇವಿ ಕಾರ್ಯಕ್ರಮ ನಿರೂಪಿಸಿದರು. ಮಹಾಸಭಾದ ಉಪಾಧ್ಯಕ್ಷ ಜಿ.ಎಂ.ಕಾಂತರಾಜು ಸ್ವಾಗತಿಸಿದರು. ಕುಶಾಲನಗರ ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು.
ಸಾಧಕರಿಗೆ ಸನ್ಮಾನ: ರಸಾಯನಶಾಸ್ತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಅಂತರರಾಷ್ಟ್ರೀಯ
ವಿಜ್ಞಾನಿಯಾದ ಮಡಿಕೇರಿ ಎಫ್.ಎಂ..ಸಿ.ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ ಜೆ.ಜಿ.ಮಂಜುನಾಥ್, ಸಮಾಜ ಸೇವಕರಾದ ಶಿರಂಗಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ, ಕುಟ್ಟದ ಹಿರಿಯ ನಾಗರಿಕ ಮಹದೇವಪ್ಪ,
ಜೆ.ಸಿ.ಐ.ಸಂಸ್ಥೆಯ ವಲಯ ಉಪಾಧ್ಯಕ್ಷರಾದ ಕೂಡುಮಂಗಳೂರಿನ ಕೆ.ಡಿ.ಪ್ರಶಾಂತ್, ಹೆಬ್ಬುಲುಸೆ ಪಟೇಲ್ ತಮ್ಮಯ್ಯ, ಹೊಸಪಟ್ಟಣದ ಪೂರ್ಣಿಮ ಶಿವಕುಮಾರ್, ಸೋಮವಾರಪೇಟೆಯ ನಿವೃತ್ತ ಮುಖ್ಯ ಶಿಕ್ಷಕಿ ಜಲಜಾ ಶೇಖರ್ ಅವರನ್ನು ಮಹಾಸಭಾದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗಮನ ಸೆಳೆದ ಮೆರವಣಿಗೆ: ಜನಜಾಗೃತಿ ಸಭೆ ಅಂಗವಾಗಿ ಇದಕ್ಕೂ ಮುನ್ನ ಕುಶಾಲನಗರ ಪಟ್ಟಣದ ಬಸವೇಶ್ವರ ದೇವಾಲಯದ ಬಳಿಯಿಂದ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಬೆಳ್ಳಿರಥದ ಮೂಲಕ ಮೆರವಣಿಗೆ ನಡೆಸಲಾಯಿತು.
ಹಾನ್ ಗಲ್ ಶ್ರೀ ಕುಮಾರಸ್ವಾಮಿಗಳ 156 ನೇ ಜಯಂತಿ ಹಾಗೂ ಡಾ ಶಿವಕುಮಾರ ಸ್ವಾಮೀಜಿ ಜಯಂತಿ ಅಂಗವಾಗಿ ಬೆಳ್ಳಿರಥದಲ್ಲಿ ಸ್ವಾಮೀಜಿಗಳ ಭಾವಚಿತ್ರವನ್ನು ಇಟ್ಟು ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಮಹಿಳೆಯರು ಕಳಶ ಹೊತ್ತ ಸಾಗಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಚಾಮರಾಜನಗರದ ಬೆಟ್ಟಹಳ್ಳಿ ಮಾರಮ್ಮನ ಕಲಾವಿದ ಬಾಲು ನೇತೃತ್ವದಲ್ಲಿ ಪ್ರದರ್ಶಿಸಿದ ಡೊಳ್ಳು ಕುಣಿತ ಗಮನ ಸೆಳೆಯಿತು.
ಎಚ್.ಡಿ.ಕೋಟೆ ತಾಲ್ಲೂಕಿನ ಹಳೆ ಹೆಗ್ಗುಡಿಲು ಗ್ರಾಮದ ಕಲಾವಿದ ನೀಲಕಂಠ ನೇತೃತ್ವದಲ್ಲಿ ಪ್ರದರ್ಶಿಸಿದ
ವೀರಗಾಸೆ ನೃತ್ಯ ಪ್ರದರ್ಶನ ಜನರ ಗಮನ ಸೆಳೆಯಿತು.