ನಾಪೋಕ್ಲು ಅ.30 : ಪುರಾತನ ಕಾಲದಿಂದ ಸಾಂಪ್ರದಾಯಿಕವಾಗಿ ಸಂರಕ್ಷಿಸಲ್ಪಟ್ಟ ಉಪಯೋಗಿಸಲ್ಪಟ್ಟ ವನ್ಯಜೀವಿಗಳ ಉತ್ಪನ್ನಗಳ ವಿಷಯದಲ್ಲಿ ಆತಂಕ ಮತ್ತು ಗೊಂದಲ ಏರ್ಪಟ್ಟಿದೆ. ಇದು ಕೊಡಗಿನ ಜನರಿಗೂ ಸಮಸ್ಯೆಯಾಗಲಿದೆ. ಈ ಬಗ್ಗೆ ಶಾಸಕರು ಜನರಿಗೆ ಸ್ಪಂದಿಸುವಂತೆ ಅಖಿಲ ಕೊಡವ ಸಮಾಜ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದೆ.
ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಿಯಪ್ಪ, ಗೌರವ ಕಾರ್ಯದರ್ಶಿ ಕೀತಿಯಂಡ ವಿಜಯ ಕುಮಾರ್ ಮಾತನಾಡಿ,
ನೆಲಜಿ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಶಾಸಕರನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಿಯಪ್ಪ , ಗೌರವ ಕಾರ್ಯದರ್ಶಿ ಕೀತಿಯಂಡ ವಿಜಯ ಕುಮಾರ್ ಅವರು ಭೇಟಿಯಾಗಿ ಚರ್ಚಿಸಿದರು.
ರಾಜ್ಯದ ಜನಸಾಮಾನ್ಯರಲ್ಲಿ ಬೆಂಗಳೂರಿನ ಅರಣ್ಯಾಧಿಕಾರಿಗಳು ಸೃಷ್ಟಿಸಿದ ಆತಂಕದ ಪರಿಸ್ಥಿತಿಯನ್ನು ವಿವರಿಸಿ, ಜನಸಾಮಾನ್ಯರಲ್ಲಿ ಗೊಂದಲದ ವಾತಾವರಣವನ್ನುಂಟು ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದರು.
ಶಾಸಕ ಪೊನ್ನಣ್ಣ ಅವರು ಬೆಂಗಳೂರಿನಲ್ಲಿ ನಡೆದ ಘಟನೆಗಳ ಹಿನ್ನಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಇನ್ನೆರಡು ದಿವಸಗಳೊಳಗೆ ಜನತೆಯ ಮುಂದಿಡುವುದಾಗಿ ತಿಳಿಸಿದರು.
ಈ ಸಂದರ್ಭ ನೆಲಜಿ ಗ್ರಾಮಸ್ಥರಾದ ಮಚ್ಚೂರ ರವೀಂದ್ರ, ಚಂಗೇಟಿರ ಕುಶಾಲಪ್ಪ, ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ, ಮಣವಟ್ಟೀರ ದಯಾ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಬಾಚಮಂಡ ರಾಜ ಪೂವಣ್ಣ, ಚೀಯಕ್ ಪೂವಂಡ ರಮೇಶ್ ಮತ್ತು ಗ್ರಾಮದ ಇತರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ