ಮಡಿಕೇರಿ ಅ.31 : ಪೊನ್ನಂಪೇಟೆ ಸಿ.ಐ.ಟಿ ಕಾಲೇಜ್ ನಲ್ಲಿ ನ.3 ರಿಂದ 5ರ ವರೆಗೆ ನಡೆಯುವ ರಾಜ್ಯ ಮಟ್ಟದ ಕೃಷಿಯಂತ್ರ ಮೇಳದ ಆಹ್ವಾನ ಪತ್ರಿಕೆಯನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಮೈಸೂರಿನಲ್ಲಿ ಬಿಡುಗಡೆ ಮಾಡಿದರು.
ಕೃಷಿ ಜಿಲ್ಲೆ ಕೊಡಗಿನಲ್ಲಿ ಬೃಹತ್ ಕೃಷಿಮೇಳ ನಡೆಸುತ್ತಿರುವುದರ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿಯಂತ್ರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವ ಕೃಷಿ ಸಚಿವರನ್ನು ಮೇಳದ ಸಂಚಾಲಕರು ಹಾಗೂ ಪ್ರಾಧ್ಯಾಪಕ ವೃಂದ ವೈಯುಕ್ತಿಕವಾಗಿ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ರಾಜ್ಯದ ವಿವಿಧೆಡೆಗಳಿಂದ ಕೃಷಿ ಪರಿಕರ, ಉತ್ಪನ್ನ ಮತ್ತು ಉಪಕರಣವನ್ನು ಪ್ರದರ್ಶಿಸಲು ಕೃಷಿ ಉತ್ಪಾದಕರು ಮೇಳಕ್ಕೆ ಆಗಮಿಸುತ್ತಿದ್ದಾರೆ. 180ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ಕೃಷಿಕರು ಹಾಗೂ ಸಾರ್ವಜನಿಕರು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಕೃಷಿ ಪರಿಕರಗಳನ್ನು ಕೊಂಡುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ನ.5 ರಂದು ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಮೇಳ ಸಮಾರೋಪಗೊಳ್ಳಲಿದೆ. ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಸಹಕಾರದಿಂದ ಕೊಡಗಿನ ವಿವಿಧೆಡೆಯಿಂದ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಸರ್ವರಿಗೂ ಉಚಿತ ಪ್ರವೇಶಾತಿ ನೀಡಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ಡಾ.ರಾಮಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









