ಕುಶಾಲನಗರ/ ಕೂಡಿಗೆ ಅ.31: ಸಮುದಾಯದತ್ತ ಶಾಲಾ ಕಾರ್ಯಕ್ರಮ ವಿದ್ಯಾರ್ಥಿ-ಶಿಕ್ಷಕರು-ಪಾಲಕರ ನಡುವಿನ ಕೊಂಡಿಯಾಗಿದ್ದು, ಪರಸ್ಪರ ಅರಿತು ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಮೈಸೂರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ( ಸಿ.ಟಿ.ಇ.) ದ ಪ್ರಾಂಶುಪಾಲರು ಹಾಗೂ ಸಹ ನಿರ್ದೇಶಕಿ ಎಚ್.ಎನ್.ಗೀತಾಂಭ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ( ಅ.31 ರಂದು) ನಡೆದ ಮೊದಲ ಸಮುದಾಯದತ್ತ ಶಾಲಾ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶಾಲಾ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ ಪೋಷಕರ ಸಭೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿ- ಪೋಷಕರೊಂದಿಗೆ ಶೈಕ್ಷಣಿಕ ವಿಚಾರಗಳು ಹಾಗೂ ಶಾಲಾ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದ ಅವರು, ಶಾಲೆಯೆಂದರೆ ಕೇವಲ ಶಿಕ್ಷಕರು ಮತ್ತು ಮಕ್ಕಳಿಗಷ್ಟೇ ಸೀಮಿತವಲ್ಲ. ಎಲ್ಲರ ಶೈಕ್ಷಣಿಕ ಬದುಕು ಆರಂಭವಾಗುವುದೇ ಶಾಲೆಯಿಂದ ಶಾಲೆಗಳೂ ಸಹ ಸಮುದಾಯದ ಒಂದು ಭಾಗವೇ ಆಗಿರುವುದರಿಂದ ಶಾಲೆಯ ಪ್ರಗತಿಗೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದರು.
ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪಾಲಕರ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಪಾಲಕರು ಶಾಲೆಗೆ ಆಗಾಗ್ಗೆ ಬೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡುವುದು ಸೂಕ್ತ ಎಂದು ಗೀತಾಂಭ ಹೇಳಿದರು.
ಶಾಲಾ ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಕುರಿತು ಮಾತನಾಡಿದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ( ಡಯಟ್ ) ಯ ಪ್ರಾಂಶುಪಾಲ ಹಾಗೂ ಉಪ ನಿರ್ದೇಶಕ ( ಅಭಿವೃದ್ಧಿ) ಎಂ.ಚಂದ್ರಕಾಂತ್ , ಶಾಲೆಗಳು ಸಹ ಸಮುದಾಯದ ಒಂದು ಭಾಗ ಆಗಿರುವುದರಿಂದ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರಿಗೂ ಮಹತ್ವದ ಹೊಣೆಗಾರಿಕೆ ಇದೆ. ಪೋಷಕರು ಆಗಿಂದಾಗ್ಗೆ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂದರು.
ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕೆಂದು ತಿಳಿಸಿದರು.
ಶಾಲಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಕುರಿತು ಮಾತನಾಡಿದ ಮೈಸೂರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಮಲ್ಲೇಸ್ವಾಮಿ ಮಾತನಾಡಿ, ಎಲ್ಲಾ ಮಕ್ಕಳೂ ತಪ್ಪದೇ ಶಾಲೆಗೆ ಬರುವಂತಾಗಬೇಕು. ಮಕ್ಕಳ ಕಲಿಕಾ ಪ್ರಗತಿಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಶಾಲೆಗಳಲ್ಲಿನ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಜಾಗೃತಿ ಉಂಟುಮಾಡುವತ್ತ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಶೈಕ್ಷಣಿಕ ಪ್ರಗತಿಯ ಚಿಂತನ ಮಂಥನಗಳು ನಡೆಯುತ್ತಿರುವುದು ಸುತ್ಯಾರ್ಹ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಹತ್ವ ಹಾಗೂ ಶಾಲಾ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ನೀಡಿದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಎ.ಎಂ.ಜವರಯ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಉಷಾ, ಸದಸ್ಯರಾದ ಡಿ.ವೈ. ಶೃತಿ, ಎಂ.ನಾಗರಾಜ್, ರೇವಣ್ಣ, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಪೋಷಕರು ಇದ್ದರು.
ಇದೇ ವೇಳೆ ಅಧಿಕಾರಿಗಳು ವಿದ್ಯಾರ್ಥಿ ಪೋಷಕರೊಂದಿಗೆ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚೆ ಮಾಡಿದರು. ಪೋಷಕರು ತಮ್ಮ ಮಕ್ಕಳ ಕಲಿಕೆ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದರು.
ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲಾಭಿವೃದ್ಧಿ ಕುರಿತು ಸಮಾಲೋಚನೆ ನಡೆಸಲಾಯಿತು.









