ಮಡಿಕೇರಿ ಅ.31 : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಜಿಲ್ಲೆಯ ಎಲ್ಲಾ ನಾಗರಿಕರು ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತ ಆದೇಶ ನೀಡಿದೆ.
ಈ ಹಿನ್ನೆಲೆ ನ.1 ರಂದು ಜಿಲ್ಲೆಯ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಬಿಡಿಸಿ, ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯವನ್ನು ಬರೆಯುವುದು. ಬೆಳಗ್ಗೆ 9 ಗಂಟೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ನಾಡಗೀತೆ ಪ್ರಸಾರವಾಗಲಿದ್ದು ಸಮಸ್ತ ನಾಗರಿಕರು ಎದ್ದು ನಿಂತು ಗೌರವ ಸಲ್ಲಿಸುವುದು. ಸಂಜೆ 5 ಗಂಟೆಗೆ ಜಿಲ್ಲೆಯ ಮೈದಾನದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸುವುದು.
ಸಂಜೆ 7 ಗಂಟೆಗೆ ಮನೆಗಳು, ಕಚೇರಿ ಹಾಗೂ ಅಂಗಡಿ ಮಳಿಗೆಗಳ ಮುಂದೆ ಹಣತೆ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಿ ವಿಶಿಷ್ಟ ರೀತಿಯಲ್ಲಿ ಆಚರಿಸುವಂತೆ ಮಡಿಕೇರಿ ನಗರದ ಎಲ್ಲಾ ಸಾರ್ವಜನಿಕರಲ್ಲಿ ನಗರಸಭೆ ಪೌರಾಯುಕ್ತರಾದ ವಿಜಯ್ ಕೋರಿದ್ದಾರೆ.