ಮಡಿಕೇರಿ ನ.1 : ಕನ್ನಡ ನಾಡಿನ ಮಣ್ಣಿಗೆ, ನುಡಿಗೆ ತನ್ನದೇ ಆದ ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ. ಇಂತಹ ಪ್ರಾದೇಶಿಕ ವಿಭಿನ್ನ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ನಾವು ಮಾಡಬೇಕಿದೆಯೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಆಶಿಸಿದರು.
ಕೊಡಗು ಜಿಲ್ಲಾಡಳಿದ ವತಿಯಿಂದ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ 68ನೇ ಕನ್ನಡ ರಾಜ್ಯೋತ್ಸವವನ್ನು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಕನ್ನಡಾಂಬೆ ಭುವನೇಶ್ವರಿಗೆ ಪುಷ್ಪಾರ್ಚನೆಯ ಮೂಲಕ ಗೌರವ ಸಲ್ಲಿಸಿ ಸಚಿವರು ನಾಡಿನ ಜನತೆಗೆ ಸಂದೇಶ ನೀಡಿದರು.
ಕನ್ನಡ ರಾಜ್ಯೋತ್ಸವವು ನಾಡಿನೆಲ್ಲೆಡೆ ಕನ್ನಡ ಧ್ವಜವನ್ನು ಹಾರಿಸಿ, ನಾಡಗೀತೆಯನ್ನು ಹಾಡಿ ಸಂಭ್ರಮಿಸುವ ದಿನವಾಗಿದೆ. ಇದಕ್ಕೂ ಮಿಗಿಲಾಗಿ ಸಹಬಾಳ್ವೆಯ ಸಂದೇಶ ನೀಡಿ ಸೌಹಾರ್ದತೆಯನ್ನು ಪಸರಿಸುವ ಶುಭದಿನವೂ ಆಗಿದೆ. ಸ್ವಾಭಿಮಾನದ ಜೊತೆಗೆ ಸೋದರ ಭಾಷೆಗಳನ್ನು ಗೌರವಿಸುವ ವಿಶಾಲ ಭಾವನೆ ನಮ್ಮೆಲ್ಲರದ್ದಾಗಿದ್ದು, ಈ ಮೂಲಕ ಭಾಷೆ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ರೂಪಿತವಾಗಿರುವುದು ಕನ್ನಡ ನಾಡಿನ ಹಿರಿಮೆಯಾಗಿದೆಯೆಂದರು.
ಕನ್ನಡ, ಕರ್ನಾಟಕ, ಕರುನಾಡು ಎಂಬುದು ಕೇವಲ ಬರೀ ನೆಲ ಮತ್ತು ಭಾಷೆಯಲ್ಲ. ಅದೊಂದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ. ಕನ್ನಡ ರಾಜ್ಯೋತ್ಸವ ನಮ್ಮೆಲ್ಲರಲ್ಲಿ ಕವಿ ಕೆ.ಎಸ್. ನಿಸಾರ್ ಅಹಮ್ಮದ್‍ರವರ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಎಂಬಂತೆ ನಿತ್ಯೋತ್ಸವವಾಗಬೇಕೆಂದು ಆಶಿಸಿದರು.
ಮೈಸೂರು ರಾಜ್ಯವು ‘ಕರ್ನಾಟಕ’ ಎಂದು ಮರು ನಾಮಕರಣವಾಗಿ ಇಂದಿಗೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ನಿಮಿತ್ತ ಇಂದಿನಿಂದ 2024 ರ ನವೆಂಬರ್‍ವರೆಗೆ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ಜರುಗಲಿವೆಯೆಂದು ತಿಳಿಸಿದರು.
ಸಮಾನತೆಯೆಡೆಗೆ ಹೆಜ್ಜೆ-ಇಂದು ಕರುನಾಡು ಇಡೀ ದೇಶದಲ್ಲೇ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಅಗ್ರಸ್ಥಾನದಲ್ಲಿದೆ. ಸರ್ಕಾರದ ಗೃಹ ಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲ ಬಗೆಯ ಜನರನ್ನು ಪ್ರಗತಿ ಮತ್ತು ಸಮಾಜನತೆಯೆಡೆಗೆ ಕೊಂಡೊಯ್ಯುತ್ತಿದ್ದೇವೆ. ಈ ಯೋಜನೆಗಳ ಮೂಲಕ ನಮ್ಮ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ನಿರ್ಮಾಣ ಮಾಡುತ್ತಿರುವುದಾಗಿ ಹೆಮ್ಮೆಯಿಂದ ನುಡಿದರು.
ಆಕರ್ಷಕ ಪಥ ಸಂಚಲನ-ಆರ್‍ಪಿಐ ಚನ್ನನಾಯಕ್ ನೇತೃತ್ವದಲ್ಲಿ ನಗರದ ವವಿಧ ಶಾಲಾ ಕಾಲೇಜುಗಳ ಎನ್‍ಸಿಸಿ, ಸೇವಾದಳ, ಸ್ಕೌಟ್ಸ್, ಗೈಡ್ಸ್, ಜಿಲ್ಲಾ ಪೊಲೀಸ್ ಸಶಸ್ತ್ರ ದಳ, ನಾಗರಿಕ ಸೇವಾ ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ಇಲಾಖೆಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಚಿವರು ಪಥ ಸಂಚಲನದ ಗೌರವ ವಂದನೆ ಸ್ವಕರಸಿದರು.
ಸಾಂಸ್ಕೃತಿಕ ಕಾರ್ಯಕ್ರಮ-ಸಚಿವರ ಕನ್ನಡ ರಾಜ್ಯೋತ್ಸವ ಸಂದೇಶದ ಬಳಿಕ ಸಂತ ಮೈಕೆಲರ ಪ್ರೌಢ ಶಾಲೆ, ಸಂತ ಜೋಸೆಫg ಪ್ರೌಢ ಶಾಲೆ, ರಾಜ ರಾಜೇಶ್ವರಿ ಪ್ರೌಢ ಶಾಲೆ, ಕೊಡಗು ವಿದ್ಯಾಲಯ, ಜನರಲ್ ತಿಮ್ಮಯ್ಯ ಶಾಲೆ,ಬಾಲಕರ ಬಾಲಮಂದಿರ ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾಥಿರ್ಧಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮೆರವಣಿಗೆ- ಇಂದು ಬೆಳಗ್ಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಕೋಟೆ ಆವರಣದಿಂದ ಸ್ತಬ್ಧ ಚಿತ್ರಗಳ ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯಿತು.
ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕರಾದ ಡಾ.ಮಂತರ್ ಗೌಡ ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
ಪಥ ಸಂಚಲನದಲ್ಲಿ 18 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗೊಂಬೆ ಕುಣಿತ, ಡೊಳ್ಳು ಕುಣಿತ ಕಲಾ ತಂಡಗಳು ಭಾಗವಹಿಸಿದ್ದವು.
ಮೈಸೂರಿನ ಅಮ್ಮ ರಾಮಚಂದ್ರ ತಂಡದವರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’(ಹುಯಿಲಗೋಳ ನಾರಾಯಣರಾಯರು), ‘ಎಲ್ಲಾದರು ಇರು ಎಂತಾದರು ಇರು…’(ಕುವೆಂಪು), ‘ಒಂದೇ ಒಂದೇ ಕರ್ನಾಟಕ ಒಂದೇ…’(ದ.ರಾ.ಬೇಂದ್ರೆ), ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ..’(ಸಿದ್ದಯ್ಯ ಪುರಾಣಿಕ) ಮತ್ತು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ..’(ಚೆನ್ನವೀರ ಕಣವಿ) ಗೀತೆಗಳನ್ನು ಹಾಡಿ ಗಮನ ಸೆಳೆದರು.